ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯ ಮೇಲೆ ಕಿರಾತಕನೊಬ್ಬ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದು, ಮಹಿಳೆಯೊಂದಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆ.
ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದ ಮಹಿಳೆಯ ಹಿಂದೆ ಬಿದ್ದಿದ್ದ ಗೋರಿಪಾಳ್ಯದ ನಿವಾಸಿ ಆರೋಪಿ ಅಹ್ಮದ್, ತನ್ನನ್ನು ಮದುವೆಯಾಗುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದ. ಇದೇ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ವೇಳೆ ಆರೋಪಿ ಅಹ್ಮದ್, ಮಹಿಳೆಯ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಸಾರಕ್ಕಿ ಸಿಗ್ನಲ್ ಬಳಿ ಈ ಘಟನೆ ನಡೆದಿದ್ದು, ಆಸಿಡ್ ದಾಳಿಗೊಳಗಾದ ಮಹಿಳೆಯ ಕಣ್ಣುಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದು, ಆಸಿಡ್ ದಾಳಿಗೆ ಒಳಗಾದ 34 ವರ್ಷದ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದು, ಆಕೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾಳೆ. ಮಹಿಳೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿಯೇ ಆರೋಪಿ ಅಹ್ಮದ್ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆರೋಪಿ ಅಹ್ಮದ್ ಗೂ ಅದಾಗಲೇ ವಿವಾಹವಾಗಿದೆ. ಅದರೆ ವಿಚ್ಛೇದನ ಪಡೆದುಕೊಂಡಿರಲಿಲ್ಲ.
ಆದರೂ ಅಹ್ಮದ್ ಮಹಿಳೆಯನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ನಿನಗೆ ಡಿವೋರ್ಸ್ ಆಗಿಲ್ಲ. ಹಾಗಾಗಿ ಮದುವೆಯಾಗಲ್ಲ ಎಂದು ಮಹಿಳೆ ನಿರಾಕರಿಸಿದ್ದಾಳೆ. ಇಂದು ಬೆಳಿಗ್ಗೆ ವಾಕಿಂಗ್ ಗೆ ಇಬ್ಬರೂ ಜತೆಯಲ್ಲಿಯೇ ಹೋಗಿದ್ದು, ಈ ವೇಳೆ ಮದುವೆ ವಿಷಯ ಪ್ರಸ್ತಾಪವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದ ಆರೋಪಿ ಅರ್ಧ ಬಾಟಲ್ ನಷ್ಟು ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ತಂದು ಮಹಿಳೆಯ ಮೇಲೆ ಎರಚಿದ್ದಾನೆ. ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.