ಬೆಳಗಾವಿ: ಕೋವಿಡ್ ನಿಯಮಗಳನ್ನು ಜನನಾಯಕರೇ ಉಲ್ಲಂಘನೆ ಮಾಡುವ ಮೂಲಕ ಬೇಜವಾಬ್ದಾರಿ ಮೆರೆದಿದ್ದು, ಜನಪ್ರತಿನಿಧಿಗಳಿಗೊಂದು, ಜನಸಾಮಾನ್ಯರಿಗೊಂದು ರೂಲ್ಸ್ ಎನ್ನುವಂತಾಗಿದೆ. ಶಾಸಕ ರೇಣುಕಾಚಾರ್ಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತೋರ್ವ ಶಾಸಕರು ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ಶಾಸಕ ಅನಿಲ್ ಬೆನಕೆ ವೀಕೆಂಡ್ ಕರ್ಫ್ಯೂ ಜಾರಿಯಿದ್ದರೂ, ನಿಯಮ ಉಲ್ಲಂಘನೆ ಮಾಡಿ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ಕಾರ್ಯಕ್ರಮ ಆಚರಿಸಿದ್ದಾರೆ. ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಲಾಭಿಷೇಕ ಮಾಡಿದ್ದಾರೆ. ಈ ವೇಳೆ ಶಾಸಕರೊಂದಿಗೆ ಹಲವು ಬೆಂಬಲಿಗರು ಪಾಲ್ಗೊಂಡಿದ್ದರು.
ಎರಡು ದಿನಗಳ ಹಿಂದಷ್ಟೇ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ನೀಡುವ ಮೂಲಕ ಕೋವಿಡ್ ನಿಯಮ ಗಾಳಿಗೆ ತೂರಿದ್ದ ಶಾಸಕ ಇಂದು ಮತ್ತೆ ರೂಲ್ಸ್ ಬ್ರೇಕ್ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ಮಾಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ನಾಯಕರೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದರೂ ಪೊಲೀಸರಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.