ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸಿಎಂ ಹೇಳಿಕೆ ಬೆನ್ನಲ್ಲೇ ಇದೀಗ ಹಲವರು ಪರ್ಯಾಯ ನಾಯಕತ್ವದ ಮಾತುಗಳನ್ನಾಡುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂ.ಎಲ್.ಸಿ. ಹೆಚ್. ವಿಶ್ವನಾಥ್, ಸಿಎಂ ಹೇಳಿಕೆಯಲ್ಲಿ ಸ್ಪಷ್ಟತೆಯಿದೆ ಹೊರತು ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ಯಾವಾಗ ಸೂಚಿಸುತ್ತೆ ಆಗ ರಾಜೀನಾಮೆ ನೀಡುತ್ತೇನೆ. ಅಲ್ಲಿಯವರೆಗೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಲ್ಲಿ ಅನಗತ್ಯ ಗೊಂದಲ ಬೇಡ. ಆದರೆ ರಾಜ್ಯದಲ್ಲಿ ಪರ್ಯಾಯ ನಾಯಕರು ಬಹಳಷ್ಟು ಜನರಿದ್ದಾರೆ ಎಂದರು.
ಮತ್ತೋರ್ವ ನಾಯಕರು ಬರುವುದಾದರೆ ವೀರಶೈವ ಸಮುದಾಯದವರೇ ಬರಲಿ. ವೀರಶೈವರಲ್ಲಿ ಪಂಚಮಸಾಲಿಗಳು ಬಹಳಷ್ಟಿದ್ದಾರೆ. ಮುರುಗೇಶ್ ನಿರಾಣಿ, ಯತ್ನಾಳ್ ಎಲ್ಲರೂ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯವಿರುವವರು. ಯಡಿಯೂರಪ್ಪನವರಂತೆಯೇ ಸಮರ್ಥ ನಾಯಕರಾಗಬೇಕು. ಒಟ್ಟಾರೆ ಕಾಮನ್ ಸೆನ್ಸ್ ಇರುವ ಸಿಎಂ ಬಂದರೆ ಸಾಕು ಎಂದು ಹೇಳಿದ್ದಾರೆ.