ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಬ್ಯಾಂಕುಗಳ ವಿಲೀನಕ್ಕೆ ಸಜ್ಜಾಗಿದೆ.
ಪ್ರಾದೇಶಿಕ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಪ್ರತಿಯೊಂದು ರಾಜ್ಯದಲ್ಲಿಯೂ ಒಂದು ಗ್ರಾಮೀಣ ಬ್ಯಾಂಕಿಗೆ ಸಂಖ್ಯೆ ಸೀಮಿತಗೊಳಿಸುವ ಉದ್ದೇಶವಿದೆ. ದೇಶದಲ್ಲಿ ವಿವಿಧ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಇದ್ದು, ಅವುಗಳ ಸಂಖ್ಯೆಯನ್ನು 28ಕ್ಕೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಗುರಿಯೊಂದಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಯೋಜನೆ ಸಿದ್ಧಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ನಬಾರ್ಡ್ ನೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.
2004 -05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದುವರೆಗೆ ಮೂರು ಹಂತಗಳಲ್ಲಿ ವಿಲೀನ ಪ್ರಕ್ರಿಯೆ ನಡೆದಿದೆ. 196 ರಷ್ಟಿದ್ದ ಗ್ರಾಮೀಣ ಬ್ಯಾಂಕ್ ಗಳ ಸಂಖ್ಯೆ 43ಕ್ಕೆ ಇಳಿಕೆಯಾಗಿದೆ. ಈಗ ಮತ್ತೊಂದು ಸುತ್ತಿನ ವಿಲೀನ ಪ್ರಕ್ರಿಯೆ ಆರಂಭವಾಗಲಿದ್ದು, ಗ್ರಾಮೀಣ ಬ್ಯಾಂಕುಗಳ ಸಂಖ್ಯೆಯನ್ನು 28ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.
ಇದರಿಂದಾಗಿ ಬ್ಯಾಂಕುಗಳ ವೆಚ್ಚ ಕಡಿಮೆಯಾಗಲಿದೆ. ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯವಾಗಲಿದ್ದು, ಬ್ಯಾಂಕ್ ಕಾರ್ಯಾಚರಣೆ ನಿರ್ವಹಣೆ ಹೆಚ್ಚು ಸುಲಭವಾಗುತ್ತದೆ. ಜನರನ್ನು ತಲುಪಲು ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.