ಚಿಕ್ಕಬಳ್ಳಾಪುರ: ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಅಪಘಾತ ಸಂಭವಿಸಿದ್ದು, ಅಯ್ಯಪ್ಪ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ಕಾರು ಪಂಚರ್ ಆಗಿದ್ದರಿಂದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 22 ವರ್ಷದ ಧರಣೀಶ್ ಹಾಗೂ 52 ವರ್ಷದ ನಿರಂಜನ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಆಂಧ್ರ ಮೂಲದವರು ಎಂದು ತಿಳಿದಿಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪೇರಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.