ಬೆಂಗಳೂರು; ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಅನುಮತಿ ಪಡೆಯದೇ ಶಾಲೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಸ್ಥೆ ವಿರುದ್ಧ ದೂರು ನೀಡಿದ್ದು, ಬೆಂಗಳೂರಿನ ವರ್ತೂರು ಬಳಿಯ ಹರಳೂರು ರಸ್ತೆಯಲ್ಲಿರುವ ಶಾಲೆಯ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಆರ್ಕಿಡ್ ಶಾಲೆ ಈ ವರ್ಷ 77ಕ್ಕೂ ಹೆಚ್ಚು ಮಕ್ಕಳ ಅಡ್ಮಿಷನ್ ಮಾಡಿಕೊಂಡಿದ್ದು, ದಾಖಲಾತಿ ವೇಳೆ ಪೋಷಕರಿಂದ ಶಾಲೆ ಲಕ್ಷಾಂತರ ರೂಪಾಯಿ ಹಣ ಪಡೆದಿದೆ ಎಂದು ಅಧಿಕಾರಿಗಳು ದೂರಿದ್ದಾರೆ.
ಇನ್ನು ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಬಳಿಯ ಆರ್ಕಿಡ್ ಶಾಲೆ ಕೂಡ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಇದರಿಂದಾಗಿ ಶಾಲೆಯಲ್ಲಿ ಕಲಿಯುತ್ತಿರುವ 104 ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಪೋಷಕರು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಮಕ್ಕಳ ಅಡ್ಮಿಷನ್ ಮಾಡಿದ್ದು, ಈಗ ಶಾಲೆ ಅನುಮತಿಯನ್ನೇ ಪಡೆದುಕೊಂಡಿಲ್ಲ ಎಂಬುದು ಪೋಷಕರ ಆತಂಕಕ್ಕೆ ಕರಣವಾಗಿದೆ.