ಹುಬ್ಬಳ್ಳಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ 40% ಕಮಿಷನ್ ಆರೋಪ ಮಾಡಿದ್ದರ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಹೆಸ್ಕಾಂ ಎಂಡಿ ವಿರುದ್ಧ 25% ಕಮಿಷನ್ ಆರೋಪ ಕೇಳಿಬಂದಿದೆ.
25% ಕಮಿಷನ್ ಪಡೆದು ಹೊರ ರಾಜ್ಯದವರಿಗೆ ಟೆಂಡರ್ ನೀಡಲಾಗಿದೆ ಎಂದು ಹೆಸ್ಕಾಂ ಗುತ್ತಿಗೆದಾರರು ಆರೋಪಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಸ್ಕಾಂ ಗುತ್ತಿಗೆದಾರರು 25% ಕಮಿಷನ್ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದಾರೆ ಒಟ್ಟು 472 ಕೋಟಿ ರೂಪಾಯಿಗೆ ಟೆಂಡರ್ ನೀಡಲಾಗಿದೆ. ರಾಜ್ಯದ ಜನರಿಗೆ ಗುತ್ತಿಗೆ ನೀಡಿದ್ದರೆ 300 ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿತ್ತು. ಆದರೆ ಕಮಿಷನ್ ಆಸೆಗಾಗಿ ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದು ದೂರಿದ್ದಾರೆ.
ಹೆಸ್ಕಾಂ ಎಂಡಿ ಡಿ. ಭಾರತಿ ಹಾಗೂ ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಅಧಿಕೃತ ಟೆಂಡರ್ ಹಿಂಪಡೆಯದಿದ್ದರೆ ಪ್ರಧಾನಿ ಮೋದಿವರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.