ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ ಈಗ ನೂರರ ಗಡಿ ದಾಟಿದೆ. ತೈಲ ಬೆಲೆ ಗಗನಮುಖಿ ಯಾಗುತ್ತಿರುವುದರಿಂದ ಜನರು ಬ್ಯಾಟರಿ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ಆದರೆ ಇತ್ತೀಚಿಗೆ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳು ಸ್ಫೋಟಗೊಳ್ಳುತ್ತಿರುವುದು ವರದಿಯಾಗುತ್ತಿದ್ದು, ಅವುಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಲಗುವ ಕೋಣೆಯಲ್ಲಿ ಚಾರ್ಜ್ ಗೆ ಹಾಕಲಾಗಿದ್ದ ಸ್ಕೂಟರ್ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ.
ಮೃತಪಟ್ಟವರನ್ನು ಶಿವಕುಮಾರ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮತ್ತು ಮಕ್ಕಳಿಗೆ ಗಾಯಗಳಾಗಿವೆ.
ಕೂಗಾಟದ ಸದ್ದು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸಹಾಯಕ್ಕೆಂದು ಧಾವಿಸಿದ್ದಾರೆ. ಈ ವೇಳೆಗಾಗಲೇ ಶಿವಕುಮಾರ್ ಮೃತಪಟ್ಟಿದ್ದು, ಅವರ ಪತ್ನಿಯ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.