ಮಂಡ್ಯ: 2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ಹೋರಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ, ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು. ರಾಷ್ಟ್ರೀಯ ಪಕ್ಷಗಳು ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯದ ಸಂಪತ್ತು ಲೂಟಿ ಮಾಡಲು ಹೊರಟಿವೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್ ಝೀರೋ: ಅಚ್ಚರಿಕೆ ಹೇಳಿಕೆ ನೀಡಿದ ಹೆಚ್.ಡಿ. ರೇವಣ್ಣ
ರಾಜ್ಯ ಬಿಜೆಪಿ ಸರ್ಕಾರದಲ್ಲಿನ ಗೊಂದಲ ಬಗೆಹರಿಸಲೆಂದು ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿಲ್ಲ, ಅದು ಅವರಿಗೆ ಬೇಕಾಗಿಯೂ ಇಲ್ಲ. ಇಲ್ಲಿ ಸಮಸ್ಯೆಗಳು ಹೆಚ್ಚಾದಷ್ಟು ಅವರಿಗೆ ಕಾಸು ಜಾಸ್ತಿ ಬರುತ್ತದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ನಮ್ಮ ಸಂಪತ್ತು ಲೂಟಿ ಮಾಡಲು ಪ್ರೋತ್ಸಾಹ ನೀಡುತ್ತಿವೆ ಹೊರತು ಇಲ್ಲಿನ ಸಮಸ್ಯೆ ಬಗೆಹರಿಸುವುದಿಲ್ಲ. ರಾಜ್ಯದ ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಸ್ತುವಾರಿಗಳನ್ನು ನೇಮಿಸುವುದು ಸಮಸ್ಯೆ ಬಗೆಹರಿಸುವುದಕ್ಕಲ್ಲ. ಲೂಟಿಯ ಒಂದು ಭಾಗವನ್ನು ಕೊಂಡೊಯ್ಯಲು ನೇಮಿಸುತ್ತಾರೆ. ರಾಷ್ಟ್ರೀಯ ಪಕ್ಷಗಳು ನಮ್ಮ ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದರು.