ಬೆಂಗಳೂರು: ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿದಾಯದ ಭಾಷಣ ಮಾಡಿದ್ದು, ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ, ಇದು ತಮ್ಮ ಕೊನೆ ಭಾಷಣವೆಂದು ಭಾವುಕರಾದ ಪ್ರಸಂಗ ನಡೆದಿದೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಹಾಗೂ ವಿದಾಯದ ಭಾಷಣ ಮಾಡಿದ ಯಡಿಯೂರಪ್ಪ, ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈ ವೇಳೆ ವಿಪಕ್ಷ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಶಿವಲಿಂಗೇಗೌಡರು ಯಡಿಯೂರಪ್ಪ ಮತ್ತೆ ಚುನಾವಣೆಗೆ ನಿಂತು ಗೆಲ್ಲಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ಭಾವುಕರಾದ ಯಡಿಯೂರಪ್ಪ, ಮತ್ತೆ ನಾನು ಸದನಕ್ಕೆ ಬರುವುದಿಲ್ಲ, ಚುನಾವಣೆಗೆ ನಿಲ್ಲುವುದಿಲ್ಲ, ಇದು ಒಂದು ರೀತಿಯ ವಿದಾಯದ ಭಾಷಣ ಎಂದು ಗದ್ಗದಿತರಾದರು. ವಿಪಕ್ಷದ ಬಹಳಷ್ಟು ನಾಯಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಕಾಂಗ್ರೆಸ್ ಮತ್ತೆ ವಿಪಕ್ಷದಲ್ಲಿಯೇ ಕೂರುವುದು ನಿಶ್ಚಿತ ಎಂದರು.
ಸಿಎಂ ಬೊಮ್ಮಾಯಿ ಅವರು 7ನೇ ವೇತನ ಆಯೋಗ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರ ಬಜೆಟ್ ಮಂಡನೆಯನ್ನು ಶ್ಲಾಘಿಸಿದ ಯಡಿಯೂರಪ್ಪ, ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.