ಉಡುಪಿ: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಹಿಜಾಬ್ ಗೆ ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆಯಿಂದಲೇ ದೂರ ಉಳಿದಿದ್ದಾರೆ.
ಉಡುಪಿ ಜಿಲ್ಲೆಯ ವಿದ್ಯೋದಯ ಕಾಲೇಜಿನಲ್ಲಿ ಹಾಲ್ ಟಿಕೆಟ್ ಪಡೆದ ಆಲಿಯಾ ಆಸಾದಿ ಹಾಗೂ ರೇಷಂ ಎಂಬ ಇಬ್ಬರು ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿಯರು, ನಿನ್ನೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಆದರೆ ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿತ್ತು. ಕೋರ್ಟ್ ಆದೇಶದಂತೆ ಧಾರ್ಮಿಕ ಚಿಹ್ನೆ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ಇದರಿಂದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆಯೇ ಮನೆಗೆ ವಾಪಸ್ ತೆರಳಿದ್ದರು.
ಇದೀಗ ವಿದ್ಯಾರ್ಥಿನಿ ಆಲಿಯಾ ಆಸಾದಿ ಟ್ವೀಟ್ ಮಾಡಿದ್ದು, ನನಗೆ ಹಾಗೂ ರೇಷಂ ಗೆ ಪರೀಕ್ಷೆ ಬರೆಯಲು ಸಿಬ್ಬಂದಿಗಳು ಅವಕಾಶ ನೀಡಿಲ್ಲ. ನಾವು ಮತ್ತೆ ಮತ್ತೆ ನಿರಾಸೆಗೊಳಗಾಗುತ್ತಿದ್ದೇವೆ. ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದಾರೆ. ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಇಲ್ಲಿ ನಡೆದಿರುವ ಅಪರಾಧವಾದರೂ ಏನು? ನಮ್ಮ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ? ಎಂದು ಪ್ರಶ್ನಿಸಿದ್ದಾಳೆ.
ಹಿಜಾಬ್ ಹೋರಾಟದಲ್ಲಿ ತೊಡಗಿರುವ ಮೂವರು ವಿದ್ಯಾರ್ಥಿನಿಯರಾದ ಆಲಿಯಾ, ರೇಷಂ ಹಾಗೂ ಅಲ್ಮಾತ್ ಎಂಬ ಮೂವರು ವಿದ್ಯಾರ್ಥಿನಿಯರು ಇಂದು ಗಣಿತ ಪರೀಕ್ಷೆ ಬರೆಯಬೇಕಿತ್ತು. ಆದರೆ ಹಿಜಾಬ್ ಗೆ ಪಟ್ಟು ಹಿಡಿದು ಈ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಯಿಂದಲೇ ದೂರ ಉಳಿದಿದ್ದಾರೆ.