ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಇಂದು ಕೂಡ ಕಾಂಗ್ರೆಸ್ ಸದಸ್ಯರು ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಧರಣಿ ನಡೆಸಿದ ಘಟನೆ ನಡೆದಿದೆ.
ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಈಗ ಅದೆಲ್ಲ ಸಾಧ್ಯವಿಲ್ಲ. ಕಲಾಪ ನಡೆಸಲು ಸಹಕರಿಸಿ ಎಂದು ಸೂಚಿಸಿದ್ದಾರೆ. ಅಲ್ಲದೇ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುತ್ತಿರುವುದಾಗಿ ತಿಳಿಸಿದರು.
ಇದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಪರಿಷತ್ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಕೆಲ ಬಿಜೆಪಿ ಸದಸ್ಯರು ಸದನದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಇನ್ನಷ್ಟು ಕೆರಳಿ ಕೆಂಡವಾದ ಕಾಂಗ್ರೆಸ್ ಸದಸ್ಯರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ-ಕೋಲಾಹಲ ಆರಂಭವಾಗುತ್ತಿದ್ದಂತೆ ಸಭಾಪತಿ ಹೊರಟ್ಟಿ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ ಎಂದು ಹೇಳಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.