ಬೆಂಗಳೂರು: ನೈಸ್ ಕಂಪನಿ ಕಾರ್ಯವೈಖರಿ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಉತ್ತಮ ರಸ್ತೆ ನಿರ್ಮಿಸುವ ಭರವಸೆಯೊಂದಿಗೆ ಸರ್ಕಾರದ ಜಮೀನನ್ನು ನೈಸ್ ಸಂಸ್ಥೆ ಅಡವಿಟ್ಟಿತ್ತು. ರೈತರ ಜಮೀನು ಪಡೆದು ಹಣ ನೀಡಲಿಲ್ಲ. ಇಂದಿಗೂ ಜನರು ಪರದಾಡುತ್ತಿದ್ದಾರೆ. ಕಂಪನಿ ಬಗ್ಗೆ ಎಚ್ಚರಿಕೆ ವಹಿಸಲು ಪತ್ರ ಬರೆದರೂ ಸಿಎಂ ಸಚಿವರಿಂದ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ನೈಸ್ ಕಂಪನಿ ಕಾರ್ಯ ವೈಖರಿ ಬಗ್ಗೆ ಎಚ್ಚರ ವಹಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ, ಸಚಿವರು, ಸಿಎಂ ಅವರಿಗೂ ಹೇಳಿದ್ದೆ. ಆದರೆ ಸಮರ್ಪಕ ಉತ್ತರ ಬಂದಿಲ್ಲ ಎಂದರು.
BIG BREAKING: ಜೆಡಿಎಸ್ ಮತ್ತೊಂದು ವಿಕೆಟ್ ಪತನ; ಹೊರಟ್ಟಿ ಬಿಜೆಪಿ ಸೇರ್ಪಡೆ
ಮೈಸೂರು ರಸ್ತೆ ಪೂರ್ಣವಾಗುವ ಮೊದಲೇ ಟೋಲ್ ಸಂಗ್ರಹ ಆರಂಭಿಸಿದರು. 2015ರಲ್ಲಿ ನೈಸ್ ಕಂಪನಿಗೆ ಅವಕಾಶ ಮಾಡಿಕೊಡಲಾಗಿತ್ತು. 2016ರಲ್ಲಿ ಕಂಪನಿಯವರು ಸ್ಟೇ ತಂದರು. 2016ರಿಂದ ಈವರೆಗೆ ಒಂದು ದಿನಕ್ಕೆ ಎಷ್ಟು ಟೋಲ್ ಸಂಗ್ರಹವಾಗುತ್ತಿದೆ ಎಂದು ಯಾರೂ ಪರಿಶೀಲಿಸಿಲ್ಲ. ಈ ಬಗ್ಗೆ ಪರಿಷತ್ ನಲ್ಲಿ ಚರ್ಚೆ ಮಾಡಿದರೂ ಯಾರೊಬ್ಬರೂ ಸರಿಯಾಗಿ ಉತ್ತರಿಸಿಲ್ಲ. ರೈತರಿಂದ ವಶಪಡಿಸಿಕೊಂಡ ಭೂಮಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ತಮಗೆ ಬೇಕಾದ ಒಪ್ಪಂದ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ಇದು ನನ್ನ ಕನಸಿನ ಯೋಜನೆ ಆಗಿತ್ತು. ಉತ್ತಮ ರಸ್ತೆ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಆದರೆ ಇಂದು ಏನಾಗುತ್ತಿದೆ ? ನನ್ನ ವಿರುದ್ಧ ನೈಸ್ ಸಂಸ್ಥೆ 2 ಕೋಟಿ ಮಾನ ನಷ್ಟ ಮೊಕದ್ದಮೆ ಹಾಕಿತ್ತು. ಸಿಎಂ ಗೆ ಪತ್ರ ಬರೆದರೂ ಉತ್ತರಿಸಲಿಲ್ಲ. ಲೋಕೋಪಯೋಗಿ ಸಚಿವರು ಕಂಪನಿ ವಿರುದ್ಧ ಶಿಸ್ತುಕ್ರಮದ ಭರವಸೆ ನೀಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸೂಚಿಸಿದ್ದೆ. ನಂತರ ಬಿ.ಎಸ್.ಯಡಿಯೂರಪ್ಪ, ಈಗ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಪತ್ರ ಬರೆದು ಭೂಮಿ ಕಳೆದುಕೊಂದವರಿಗೆ ಪರಿಹಾರ ನೀಡಿ ಎಂದು ಹೇಳಿದ್ದೆ. ಆದರೆ ಈವರೆಗೂ ಸಾಧ್ಯವಾಗುತ್ತಿಲ್ಲ. ಈಗಲಾದರೂ ಸಿಎಂ ಬೊಮ್ಮಾಯಿ ಈ ಬಗ್ಗೆ ಗಮನಹರಿಸದಿದ್ದರೆ ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.