ಮಂಗಳೂರು: ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಕಾಲೇಜಿನಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಬಂದ 14 ವಿದ್ಯಾರ್ಥಿನಿಯರನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ.
ಹಿಜಾಬ್ ಗೆ ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದ್ದರೂ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಲ್ಲದೇ ತಮಗೆ ಹಿಜಾಬ್ ಹಾಕಿ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪ್ರಾಂಶುಪಾಲರಾದ ಅನುಸೂಯ ರೈ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಗ್ರಂಥಾಲಕ್ಕೆ ತೆರಳಿ ಅಲ್ಲಿಯೇ ಕುಳಿತಿದ್ದರು. ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಕಾಲೇಜಿಗೆ ಜಿಲ್ಲಾಧಿಕಾರಿ ಆಗಮಿಸಿದ್ದಾರೆ. ಪ್ರಾಂಶುಪಾಲರ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.