ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್. ಆ ಶಕ್ತಿಗಳನ್ನು ಮಟ್ಟ ಹಾಕುವುದೇ ನಮ್ಮ ಸರ್ಕಾರಕ್ಕಿರುವ ದೊಡ್ಡ ಸವಾಲು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಯುವಕರ ಮೇಲೆ ದಾಳಿಯಾಗುತ್ತಿದೆ. ಹರ್ಷನ ನಂತರ ಪ್ರವೀಣ್ ಕೊಲೆಯಾಗಿದೆ. ಈ ಅಸಮಾಧಾನ ನಮಗೂ ಇದೆ. ನೋವಿದೆ. ನಿಜಕ್ಕೂ ನನಗೆ ಎರಡು ದಿನ ಊಟವೇ ಸೇರಲಿಲ್ಲ. ಈ ಕೊಲೆಗಾರರನ್ನು ಶೀಘ್ರವೇ ಬಂಧಿಸುತ್ತೇವೆ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಒಂದು ವ್ಯವಸ್ಥೆಯ ಮುಖ್ಯಸ್ಥನಾಗಿರುವ ನನಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸರ್ಕಾರದ ಮತ್ತು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಮ್ಮವರೇ. ಅವರದು ಸಾತ್ವಿಕ ಪ್ರತಿಭಟನೆಯಾಗಿದೆ. ಇಂತಹ ಪ್ರತಿಭಟನೆಯ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕೂಡ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಮತ್ತು ಕೈಗೊಳ್ಳುತ್ತಿದೆ. ವೋಟ್ ಬ್ಯಾಂಕ್ ಗಾಗಿ ಹಲವು ವರ್ಷಗಳಿಂದ ಕಾಂಗ್ರೆಸ್ ಮತೀಯ ಶಕ್ತಿಗಳ ಸಖ್ಯ ಬೆಳೆಸಿದೆ. ಆ ಹೊಲಸನ್ನು ಸುಧಾರಣೆಯ ಮೂಲಕ ಹೋಗಲಾಡಿಸಬೇಕಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸುಮಾರು 2 ಸಾವಿರ ಮತೀಯ ಶಕ್ತಿಗಳ ವಿರುದ್ಧ ದಾಖಲಿಸಿದ್ದ ಕೇಸ್ ಗಳನ್ನು ವಾಪಸ್ ತೆಗೆದುಕೊಂಡಿದೆ. ಅವರು ಅಧಿಕಾರದಲ್ಲಿದ್ದಾಗಲೂ ಹಿಂದೂಗಳ ಹತ್ಯೆಯಾಗಿದೆ. ಈಗ ರಾಜಕಾರಣಕ್ಕಾಗಿ ಈ ರೀತಿಯ ಮಾತನಾಡುತ್ತಿದ್ದಾರೆ. ಸರ್ಕಾರ ಶಾಂತಿ, ಸುವ್ಯವಸ್ಥೆ ಕಾಪಾಡಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಮಂಗಳೂರು ಶಾಂತವಾಗಿದೆ. ಜೈಲಿನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಇದುವರೆಗೂ 15 ಹಿರಿಯ ಕಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಎಲ್ಲಾ ಹತ್ಯೆಗಳ ಕುರಿತಂತೆ ಶೀಘ್ರ ನ್ಯಾಯಾಲಯದ ಮೂಲಕ ಬೇಗನೆ ತೀರ್ಪು ತೆಗೆದುಕೊಳ್ಳುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರು ನಿವಾಸದ ಮುಂದೆ ಎಬಿವಿಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ನನ್ನ ವಿರುದ್ಧ ಸಿಟ್ಟಲ್ಲ. ಈ ರೀತಿ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ ಅಷ್ಟೇ. ಬಿಜೆಪಿ ಕಾರ್ಯಕರ್ತರನ್ನು ಕಳೆದುಕೊಂಡ ನೋವು ಇರುತ್ತದೆ. ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಿ ಎಂದು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದರು. ಈಗಾಗಲೇ ದುಡುಕಿನ ಕ್ರಮ ಕೈಗೊಂಡಿದ್ದೇವು. ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಯಾರದ್ದೋ ಸಿಟ್ಟನ್ನು ಯಾರದ್ದೋ ಮೇಲೆ ಹಾಕಿದ್ದರು. ಕೊಲೆಗಡುಕರ ವಿರುದ್ದ ನಿಮ್ಮ ಆಕ್ರೋಶ ಇರಬೇಕಿತ್ತು. ಅನೇಕ ಹಿರಿಯರು ನಮ್ಮ ಪಕ್ಷ ಕಟ್ಟಿದ್ದಾರೆ. ನಮ್ಮ ಹಿರಿಯರ ಆಸೆ ಒಂದೊಂದೇ ಈಡೇರುತ್ತಿವೆ. ಸಿಟ್ಟು, ಆಕ್ರೋಶ, ನೋವು ನಿಜ. ಅದು ರಾಷ್ಟ್ರದ್ರೋಹಿಗಳ ವಿರುದ್ದ ಆಗಬೇಕು ಎಂದರು.
ಸಿದ್ದರಾಮಯ್ಯ ರಾಜೀನಾಮೆ ಕೇಳಿದ ವಿಚಾರದ ಬಗ್ಗೆ ಮಾತನಾಡಿ, ರಾಜೀನಾಮೆ ಕೇಳಲು ಏನು ನೈತಿಕತೆ ಇದೆ. ಮತೀಯ ಸಂಘಟನೆ ಕೇಸ್ ವಾಪಸ್ ಪಡೆದಿದ್ದಾರೆ. ಟಿಪ್ಪು ಜಯಂತಿ ಮಾಡಿ ರಕ್ತಪಾತ ಹರಿಸಿದರು. ಓಟ್ ಬ್ಯಾಂಕ್ ನಿರ್ಮಾಣಕ್ಕಾಗಿ ಯಾರು ಯಾರನ್ನೋ ಬೆಳೆಸಿಟ್ಟರು ಎಂದು ಕಿಡಿಕಾರಿದರು.