ಹುಬ್ಬಳ್ಳಿ: ಬೆಂಗಳೂರಿನ ಬಳಿಕ ಇದೀಗ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಆಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಬ್ಬಳ್ಳಿಯಲ್ಲಿ ಮತದಾರರ ಹೆಸರು ಡಿಲಿಟ್ ಆಗಿರುವ ಬಗ್ಗೆ ಇದೀಗ ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಹುಬ್ಬಳ್ಳಿಯಲ್ಲಿ ಮತದಾರರ ಹೆಸರು ಡಿಲಿಟ್ ಆಗಿರುವುದು ನಿಜ. ವಾರ್ಡ್ ನಂಬರ್ 31ರಲ್ಲಿ 586 ಮತದಾರರ ಹೆಸರು ಡಿಲಿಟ್ ಆಗಿದೆ. ಈ ಬಗ್ಗೆ ಕಮಿಷನರ್ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಯಾಕೆ ಮತದಾರರ ಹೆಸರು ಡಿಲಿಟ್ ಆಗಿದೆ ಎಂಬುದನ್ನು ತಿಳಿದುಕೊಳ್ಳುವಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಸೂಚಿಸಿದ್ದೇನೆ. ಸುಮಾರು 15ಕ್ಕೂ ಹೆಚ್ಚು ಖಾಸಗಿ ಏಜೆನ್ಸಿಗಳು ಸರ್ವೆ ಮಾಡುತ್ತಿವೆ. ಅಲ್ಪಸಂಖ್ಯಾತ ಮತದಾರರ ಹೆಸರು ಮಾತ್ರ ಡಿಲಿಟ್ ಆಗಿಲ್ಲ, ಬೇರೆ ಹೆಸರುಗಳೂ ಡಿಲಿಟ್ ಆಗಿವೆ. ಬಿಜೆಪಿ ಪರವಾದ ಮತದಾರರ ಅನೇಕ ಹೆಸರುಗಳು ಕೂಡ ಡಿಲಿಟ್ ಆಗಿವೆ. ಕಾಂಗ್ರೆಸ್ ಕಾರ್ಪೊರೇಟರ್ ಗಳು ಇರುವ ವಾರ್ಡ್ ನಲ್ಲಿ ಡಿಲಿಟ್ ಆಗಿಲ್ಲ ಎಂದು ಹೇಳಿದ್ದಾರೆ.