ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಮತದಾರನ ತೀರ್ಪಿಗೆ ಎಷ್ಟು ಹೆದರಿಕೊಳ್ಳುತ್ತಾರೆ ಎಂಬುದಕ್ಕೆ ಉಪಚುನಾವಣಾ ಫಲಿತಾಂಶ ಸಾಕ್ಷಿ. ಅದರ ಪರಿಣಾಮವಾಗಿಯೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದ ಉದ್ದಗಲಕ್ಕೂ ಚುನಾವಣೆ ನಡೆದಿಲ್ಲ. ಕೇವಲ ಉಪಚುನಾವಣೆಯಲ್ಲಿಯೇ ಜನರು ಸಂದೇಶ ರವಾನಿಸಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಪ್ರಬುದ್ಧ ಮತದಾರರೇ ಸರ್ಕಾರಕ್ಕೆ ಮಾಲೀಕರು ಎನ್ನುವುದನ್ನು ತೋರಿಸಿದ್ದಾರೆ. ಉಪಚುನಾವಣಾ ಫಲಿತಾಂಶದ ಪರಿಣಾಮವೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗಲು ಕಾರಣ ಎಂದು ಹೇಳಿದರು.
ಗ್ಯಾಸ್ ಬೆಲೆ, ಆಹಾರ ಪದಾರ್ಥ, ಸಿಮೆಂಟ್, ಕಬ್ಬಿಣ ಎಲ್ಲದರ ಬೆಲೆ ಕಡಿಮೆಯಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ನವೆಂಬರ್ 14ರಿಂದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
ಮತದಾರನ ತೀರ್ಪಿನಿಂದ ಆಡಳಿತ ವಿಫಲವಾಗಿದೆ ಎನ್ನೋದು ಎಲ್ಲರಿಗೂ ಮನವರಿಕೆಯಾಗಿದೆ. ಸರ್ಕಾರದ ಸಾಧನೆಗೆ ನೂರು ದಿನದ ಕೆಲಸಕ್ಕೆ ಸಿಎಂ ಜಿಲ್ಲೆಯ ಜನರೇ ಉತ್ತರ ಕೊಟ್ಟಿದ್ದಾರೆ. ಮತ್ತೆ ರಾಜ್ಯವನ್ನು ಕತ್ತಲಲ್ಲಿ ದೂಡುವ ಕೆಲಸವಾಗುತ್ತಿದೆ. ಮತ್ತೆ ಪವರ್ ಶಾರ್ಟೇಜ್ ಅಂತ ತೋರಿಸಿದರೆ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುವುದಿಲ್ಲ. ಮತ್ತಷ್ಟು ಉದ್ಯೋಗ ನಷ್ಟವಾಗುತ್ತದೆ. ರಾಜ್ಯದವರೇ ಕೇಂದ್ರ ಕಲ್ಲಿದ್ದಲು ಮಂತ್ರಿಯಾಗಿದ್ದರೂ ಕೂಡ ಒಂದೊಂದು ದಿನಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲು ರಾಜ್ಯಕ್ಕೆ ಬರುತ್ತಿದೆ. ಈ ಸಮಸ್ಯೆ ಬಗೆಹರಿಯಬೇಕು. ನವೆಂಬರ್ 7ರಂದು ನಡೆಯಲಿರುವ ಸಭೆಯಲ್ಲಿ ನಮ್ಮ ಹೋರಾಟದ ರೂಪು ರೇಷೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.