ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿರುವ ಮಠಾಧೀಶರ ವಿರುದ್ಧ ಕಿಡಿ ಕಾರಿರುವ ಎಂ ಎಲ್ ಸಿ ಹೆಚ್.ವಿಶ್ವನಾಥ್, ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧೀಶರುಗಳು ಜನರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರಾ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಜನತಂತ್ರದ ದಾರಿ ತಪ್ಪಿದಾಗ ಎಲ್ಲರೂ ಎಚ್ಚರಿಸುತ್ತಾರೆ. ವಿಪಕ್ಷ, ಸಮಾಜ, ಸಂಘ ಸಂಸ್ಥೆ, ಸ್ವಾಮೀಜಿಗಳು ಎಲ್ಲರೂ ಬುದ್ಧಿ ಹೇಳುತ್ತಾರೆ. ಆದರೆ ಇಂದು ಮಠಾಧೀಶರೇ ವ್ಯಕ್ತಿಯ ನಾಕತ್ವದ ಪರ ನಿಂತಿರುವುದು ಎಷ್ಟು ಸರಿ? ವೀರಶೈವಧರ್ಮ ಸರ್ವಧರ್ಮ ಬಸವೇಶ್ವರ ಧರ್ಮವಾಗಿದೆ. ಎಲ್ಲಾ ಸಮುದಾಯಕ್ಕೂ ಮಠಗಳಿವೆ. ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ, ಮಠ ಧರ್ಮಾಧಿಕಾರಿಗಳು ಸಮಾಜದ ಭಾಗವಾಗಿರಬೇಕು ಹೊರತು ರಾಜಕಾರಣ ಅಧಿಕಾರದ ಭಾಗವಾಗಬಾರದು ಎಂದು ಗುಡುಗಿದ್ದಾರೆ.
ಏಕವ್ಯಕ್ತಿ, ಪಕ್ಷದ ಪರ ಮಠಾಧೀಶರು ನಿಲ್ಲಬಾರದು. ಸ್ವಾಮಿಜಿಗಳು ಬೀದಿಗೆ ಬಂದು ಹೇಳಿಕೆಗಳನ್ನು ನೀಡುತ್ತಿರುವುದು ಧರ್ಮಾಧಿಕಾರಿಗಳಿಗೂ ಒಳ್ಳೆಯದಲ್ಲ. ಧರ್ಮಾಧಿಕಾರಿಗಳನ್ನು ತಮಗಾಗಿ ಬೀದಿಗೆ ತಂದಿರುವುದು ರಾಜಕಾರಣಿಗಳಿಗೂ ಶೋಭೆಯಲ್ಲ. ಮಠಾಧೀಶರನ್ನು ಕೈ ಮುಗಿದು ಕೇಳುತ್ತೇನೆ ಧರ್ಮದಲ್ಲಿ ರಾಜಕಾರಣ ಇರಬಾರದು. ಇಂದು ಇಂತಹ ಪರಿಸ್ಥಿತಿ ಬಂದಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ಸ್ವಾಮೀಜಿ, ಸಾಧು-ಸಂತರು ಕೂಡ ಸಂವಿಧಾನದಡಿ ಬರುತ್ತಾರೆ, ಸಂವಿಧಾನಕ್ಕಿಂತ ದೊಡ್ಡವರಿಲ್ಲ. ಸಂವಿಧಾನವೇ ಸಾರ್ವಭೌಮ. ಯಡಿಯೂರಪ್ಪ ಬದಲಾವಣೆಗೆ ಭ್ರಷ್ಟಾಚಾರ ಕಾರಣ. ರಾಜಕಾರಣಿಗಳನ್ನು ಮೀರಿ ಪಾತ್ರ ನಿರ್ವಹಣೆ ಸೂಕ್ತವಲ್ಲ. ಸ್ವಾಮೀಜಿಗಳು ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ತೆಗೆದುಕೊಂಡ ಪ್ರಮಾಣ ವಚನದ ಬಗ್ಗೆ ಓದಿದ್ದಾರೆ ಎಂದು ಭಾವಿಸುತ್ತೆನೆ ಅದು ಎಲ್ಲರಿಗೂ ಮಾರ್ಗದರ್ಶನ ಎಂಬುದು ಅರಿವಿರಲಿ ಎಂದು ಸಲಹೆ ನೀಡಿದ್ದಾರೆ.