ಶಿವಮೊಗ್ಗ: ನನ್ನ ಮಗಳಿಗೆ ಸಿಬಿಐ ನೋಟೀಸ್ ನೀಡಿದೆ. ಕಾಲೇಜು, ಸ್ಕೂಲ್ ಶುಲ್ಕ ಕಟ್ಟಿದ್ದರ ಬಗ್ಗೆಯೂ ಕೇಳುತ್ತಿದ್ದಾರೆ. ಯಾವ ಮಟ್ಟಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂಬುದನ್ನು ನೀವೇ ಯೋಚಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಮಗಳಿಗೂ ಸಿಬಿಐ ನೋಟೀಸ್ ಕಳುಹಿಸಿದೆ. ನನಗೆ ಫೆ.24ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟೀಸ್ ನೀಡಿದೆ. ಇಡಿ ವಿಚಾರಣೆಗೆ ಹೋಗಲೋ ಇಲ್ಲ ಪ್ರಜಾಧ್ವನಿ ಯಾತ್ರೆ ಮಾಡಲೋ? ದಿನಕ್ಕೊಂದು ನೋಟೀಸ್ ನೀಡಿ ತೊಂದರೆ ಕೊಡುತ್ತಿದ್ದಾರೆ. ಇಡಿ, ಸಿಬಿಐ ಎಲ್ಲಾ ನಮಗೆ ಮಾತ್ರ ಇರುವುದು, ಆಡಳಿತ ಪಕ್ಷ ಬಿಜೆಪಿಯವರಿಗೆ ಯಾವುದೂ ಇಲ್ಲ, ಯಾವ ತನಿಖೆಯೂ ಇಲ್ಲ ಎಂದು ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಹಗರಣಗಳ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ಶಿವಮೊಗ್ಗ, ಭ್ರದ್ರಾವತಿಯಲ್ಲಿ ರೈತರು ಬದುಕುವ ಹಾಗಿಲ್ಲ. ಬಿಜೆಪಿಯವರು ಎಲ್ಲಾ ಕಾರ್ಖಾನೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಸರ್ಕಾರ ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ, ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.