ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್, ಎಸ್ಡಿಪಿಐ, ಸಿಎಫ್ಐ ಮೂಗು ತೂರಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಯ್ತು ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಕಾಂಗ್ರೆಸ್ ಪಕ್ಷದ ಇಬ್ಬಗೆ ನೀತಿ, ಮತ ರಾಜಕಾರಣಕ್ಕಾಗಿ ಒಡೆದಾಳು ನೀತಿಯ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹಿಂದೆ ಸರಿದರು. ಇದಕ್ಕೆಲ್ಲಾ ಕಾಂಗ್ರೆಸ್ ನೇರ ಹೊಣೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.
ಈ ಪ್ರಕರಣದಲ್ಲಿ ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಅವರು “ಹಿಜಾಬ್ ಧರಿಸುವುದು ಮೂಲಭೂತ ಹಕ್ಕು” ಎಂದು ಪ್ರತಿಪಾದಿಸಿದ್ದರು. ಈಗ ನ್ಯಾಯಾಲಯವೇ, ಹಿಜಾಬ್ ಇಸ್ಲಾಂ ಮತದ ಅವಿಭಾಜ್ಯ ಅಂಗವಲ್ಲ ಎಂಬ ತೀರ್ಪು ನೀಡಿದೆ.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕೆಲ ಮತೀಯ ಶಕ್ತಿಗಳು ಅನಗತ್ಯವಾಗಿ ಪ್ರಚೋದನೆ ನೀಡಿದವು. ಇದರಿಂದ ವಿದ್ಯಾರ್ಥಿನಿಯರ ಶಿಕ್ಷಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯ್ತು. ಮಕ್ಕಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಈಗ ಉತ್ತರ ಸಿಕ್ಕಿದೆ ಎಂದು ಹೇಳಿದೆ.
ಶಾಲಾ ಹಂತದಲ್ಲೇ ಬಗೆಹರಿಯಬಹುದಾದ ಹಿಜಾಬ್ ವಿಚಾರವನ್ನು ನ್ಯಾಯಾಲಯದವರೆಗೆ ಎಳೆದು ತರುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸರ್ಕಾರ ಜಾರಿಗೊಳಿಸಿದ ಸಮವಸ್ತ್ರ ನೀತಿಯಲ್ಲಿ ತಪ್ಪಿಲ್ಲ. ಸಮವಸ್ತ್ರ ಮೂಲಭೂತ ಹಕ್ಕುಗಳ ಮೇಲಿನ ಸಮಂಜಸ ನಿರ್ಬಂಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹ ಎಂದು ಬಿಜೆಪಿ ತಿಳಿಸಿದೆ.