ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮತ್ತೆ ಚರ್ಚೆಗೆ ಬಂದಿದ್ದು, ಮಂತ್ರಿ ಸ್ಥಾನಕ್ಕಾಗಿ ಹಲವು ಹಿರಿಯ ಶಾಸಕರು ಮತ್ತೆ ಕಸರತ್ತು ನಡೆಸಿದ್ದಾರೆ. ಈ ಗುಂಪಿನಲ್ಲಿ ಶಾಸಕ ಎಸ್.ಎ. ರಾಮದಾಸ್ ಕೂಡ ಪ್ರಮುಖರು. ಈ ಬಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ರಾಮದಾಸ್ ತಾನು ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮಂತ್ರಿ ಸ್ಥಾನ ಸಿಕ್ಕಿದೆ, ಸಿಕ್ಕಿಲ್ಲ ಎಂದು ಹೇಳೋದಲ್ಲ, ನಾನು ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
ವಲಸಿಗರ ಪೈಕಿ ಕೆಲವರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮದಾಸ್, ಮನೆಗೆ ಸೊಸೆ ಬಂದ ಮೇಲೆ ಅವಳು ನಮ್ಮ ಮಗಳು. ಕಾಂಗ್ರೆಸ್ ನಿಂದ ಬಂದವರು ನಮ್ಮ ಸಹೋದರರು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ನಾನು ಗ್ಯಾಸ್ ಪೈಪ್ ಲೈನ್ ಗೆ ವಿರೋಧ ಮಾಡಿಲ್ಲ. ಯೋಜನೆಗೆ ನಾನು ವಿರೋಧ ಮಾಡಿದ್ದೇನೆ ಎಂಬ ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಹೇಳಿದರು.