ಶಿವಮೊಗ್ಗ: ಸಂಪುಟ ವಿಸ್ತರಣೆ ಆಗಬೇಕಾಗಿರುವುದು ಸ್ವಾಭಾವಿಕ. ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದೆ. ಹಾಗಾಗಿ ಸಂಪುಟ ವಿಸ್ತರಣೆ ಅಗತ್ಯವಿದೆ. ಸಚಿವರಾಗಬೇಕು ಎಂಬುದು ಹಲವು ಹಿರಿಯ ಶಾಸಕರ ಸಹಜವಾದ ಆಶಯ. ಅದರಲ್ಲಿ ತಪ್ಪಿಲ್ಲ. ಯಾರಿಗೆ ಸ್ಥಾನ ನೀಡಬೇಕು ಎಂಬುದು ವರಿಷ್ಠರ ತೀರ್ಮಾನ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಖಾಲಿ ಇರುವ ನಾಲ್ಕು ಸ್ಥಾನವನ್ನು ಯಾರಿಗೆ ನೀಡಿದರೆ ಉತ್ತಮ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ಖಾಲಿ ಇಲ್ಲ. ರಾಜ್ಯ ಘಟಕದ ಅಧ್ಯಕ್ಷರು ಬದಲಾಗುತ್ತಾರೆ ಎಂಬುದು ಕೇವಲ ವದಂತಿ ಎಂದು ಹೇಳಿದರು.
ಇನ್ನು ಚುನಾವಣೆಯ ಹಿತದೃಷ್ಟಿಯಿಂದ ಪಕ್ಷ ಸಂಘಟನೆಗೆ ಒತ್ತು ನೀಡುವ ಅಗತ್ಯವಿದೆ. ಹಾಗಾಗಿ ನನಗೆ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ. ಮಂತ್ರಿಯಾಗು ಅಂದಾಗ ಆಗಿದ್ದೇನೆ. ಈಗಲೂ ಹೈಕಮಾಂಡ್ ಏನು ಹೇಳುತ್ತೆ ಅದನ್ನು ಮಾಡಲು ಸಿದ್ಧ. ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟರೂ ಸ್ವೀಕರಿಸಲು ರೆಡಿಯಿದ್ದೇನೆ. ಮಂತ್ರಿ ಸ್ಥಾನಕ್ಕಿಂತಲೂ ಪಕ್ಷ ಸಂಘಟನೆ ಜವಾಬ್ದಾರಿ ನಿಭಾಯಿಸಲು ನನಗೆ ಇಷ್ಟ. ಕೇಂದ್ರ ಹಾಗೂ ರಾಜ್ಯ ನಾಯಕರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.