ಬೆಂಗಳೂರು: ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಬಿಜೆಪಿ ಶಾಸಕ ಯತ್ನಾಳ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ನಡುವೆ ವಾಗ್ವಾದ ನಡೆದಿದೆ.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆ ಪ್ರಸ್ತಾಪಿಸಿದ ಬಿಜೆಪಿ ಶಾಸಕರು ಸರ್ಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದಿದ್ದಾರೆ. ಈ ವೇಳೆ ಎದ್ದು ನಿಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಾಯಕರು ಸುಳ್ಳು ಭರವಸೆ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ವಿಪಕ್ಷ ನಾಯಕನಾಗಬೇಕು ಎಂಬ ಆಸೆಯಿಂದ ಯತ್ನಾಳ್ ಪದೇ ಪದೇ ಎದ್ದು ನಿಂತು ಮಾತನಾಡುತ್ತಿದ್ದಾರೆ. ಎಷ್ಟೇ ಬಾಯಿ ಬಡಿದುಕೊಂಡರೂ ನಿಮ್ಮನ್ನು ವಿಪಕ್ಷ ನಾಯಕನನ್ನಾಗಿ ಮಾಡಲ್ಲ ಎಂದು ಕಾಲೆಳೆದರು.
ಇದಕ್ಕೆ ಉತ್ತರಿಸಿದ ಯತ್ನಾಳ್, ನಾನು ಯಾವ ಹುದ್ದೆಯನ್ನೂ ಆಸೆ ಪಟ್ಟಿಲ್ಲ, ಆಸೆ ಪಟ್ಟಿದ್ರೆ ಸಿಎಂ ಆಗ್ತಿದ್ದೆ ಎಂದರು. ಈ ವೇಳೆ ಕೆ.ಜೆ. ಜಾರ್ಜ್, ನಿಮಗೆ ಗೊತ್ತಿಲ್ಲ ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ಯತ್ನಾಳ್, ನೀವೇನು ಸರ್ವಜ್ಞನಾ ? ಕುಳಿತುಕೊಳ್ಳಿ ಎನ್ನಲು ನೀವ್ಯಾರು ? ಮಂತ್ರಿ ಮಾಡು ಅಂತಾ ನಾನೇನು ನಿಮ್ಮನೆಗೆ ಬಂದಿದ್ನಾ ? ಎಂದು ವಾಗ್ದಾಳಿ ನಡೆಸಿದ್ದಾರೆ.