ರಾಮನಗರ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯಿಂದಾಗಿ ಮಂಚನಬೆಲೆ ಸೇತುವೆ ಕುಸಿದು ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ.
ರಾಮನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅರ್ಕಾವತಿ ನದಿ ಅಬ್ಬರಕ್ಕೆ ಮಂಚನಬೆಲೆ ಸೇತುವೆ ಕುಸಿದು ಬಿದ್ದಿದೆ. ಮಂಚನಬೆಲೆ ಜಲಾಶಯದ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಜಲಾಶಯದಿಂದ ಅರ್ಕಾವತಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ನೀರಿನ ರಭಸದ ಹೊಡೆತಕ್ಕೆ ಇದೀಗ ಮಂಚನಬೆಲೆ ಸೇತುವೆಯೇ ಕುಸಿದಿದ್ದು, ಮಾಗಡಿಯ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮಂಚನಬೆಲೆ ಸೇತುವೆ ಕುಸಿತವಾಗಿರುವುದರಿಂದ ಬದಲಿ ಮಾರ್ಗ ಅನುಸರಿಸುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ. ಮಂಚನಬೆಲೆ ರಾಂಪುರ ಗುಡ್ಡಹಳ್ಳಿ ಕಾಕರಾಮನಹಳ್ಳಿ ಮಾರ್ಗದ ಮೂಲಕ ಬಿಡದಿಗೆ ಬರುವಂತೆ ಎಸ್ ಪಿ ಸಂತೋಷ್ ಬಾಬು ತಿಳಿಸಿದ್ದಾರೆ.