ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣದ ಹಿಂದೆ ಶಿವಮೊಗ್ಗ ತುಂಗಾನದಿ ದಡದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಲಿಂಕ್ ಇದೆಯೇ ಎಂಬ ಅನುಮಾನ ದೃಢವಾಗುತ್ತಿದೆ.
ತುಂಗಾನದಿ ದಡದಲ್ಲಿ ಬಾಂಬ್ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 19ರಂದು ಶಿವಮೊಗದ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸಿನ್ ಹಾಗೂ ಮಂಗಳೂರಿನ ಮಾಜ್ ಮುನೀರ್ ಎಂಬ ಶಂಕಿತ ಉಗ್ರರನ್ನು ಬಂಧಿಸಿದ್ದರು. ಆದರೆ ಪ್ರಕರಣದ ಪ್ರಮುಖ್ಯ ಎ1 ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್ ನಾಪತ್ತೆಯಾಗಿದ್ದ.
ಪ್ರಕರಣ ನಡೆದಾಗಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಶಾರಿಕ್ ಗಾಗಿ ಪೊಲಿಸರು ಹುಡುಕಾಟ ನಡೆಸಿದ್ದರು. ಅದೇ ಶಾರಿಕ್ ಇದೀಗ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಸ್ಫೋಟ ನಡೆಸಿರುವ ಶಂಕೆ ಹೆಚ್ಚಾಗಿದೆ.
ಮಂಗಳೂರು ಆಟೋ ಸ್ಫೋಟದ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರಿಕ್ ನೇ ಮಂಗಳೂರು ಸ್ಫೋಟದ ವ್ಯಕ್ತಿ ಎಂಬ ಮಾತು ಕೇಳಿಬರುತ್ತಿದೆ.