ಹಾಸನ: ಮಂಗಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಸನದ ಉಗಾನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು, ಮಂಗಗಳನ್ನು ಸೆರೆ ಹಿಡಿದಿದ್ದ ಯಶೋಧ, ರಾಮು ದಂಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬೆಳೆ ಹಾನಿ ಮಾಡುತ್ತಿವೆ ಎಂದು ಕೋತಿಗಳ ಸೆರೆ ಹಿಡಿಯಲು ಜಮೀನಿನ ಮಾಲೀಕ ಪ್ರಸನ್ನ, ರುದ್ರೇಗೌಡ ಅವರು ಯಶೋಧ ಹಾಗೂ ರಾಮು ದಂಪತಿಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು. ಆಹಾರದ ಆಸೆ ತೋರಿಸಿ ಯಶೋಧ ಹಾಗೂ ರಾಮು ಕೋತಿಗಳನ್ನು ಸೆರೆಹಿಡಿದು ಅವುಗಳನ್ನು ಸಾಯಿಸಿದ್ದರು. ಬಳಿಕ ಚೀಲದಲ್ಲಿ ಮಂಗಗಳನ್ನು ತುಂಬಿ ಬೇಲೂರು ತಾಲೂಕು ಚೌಡನಹಳ್ಳಿ ಬಳಿ ರಸ್ತೆಬದಿ ಬಿಸಾಕಿ ಹೋಗಿದ್ದರು. ಕೆಲ ಯುವಕರ ಗುಂಪು ರಸ್ತೆ ಬದಿ ಚೀಲವನ್ನು ಬಿಚ್ಚಿ ನೋಡಿದಾಗ ಮಂಗಗಳನ್ನು ಸಾಯಿಸಿ ತಂದು ಹಾಕಿರುವುದು ಗೊತಾಗಿತ್ತು. ಕೆಲ ಮಂಗಗಳು ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ 38 ಮಂಗಗಳು ಸಾವನ್ನಪ್ಪಿದ್ದವು.