ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆಯಲು ಕಾಂಗ್ರೆಸ್ ಸಿದ್ಧವಿದೆ. ರಾಜ್ಯಕ್ಕೆ ಕರೆಪ್ಶನ್ ಕ್ಯಾಪಿಟಲ್ ಎಂಬ ಹೆಸರು ಬಂದಿದೆ. ಸಂಪುಟದ ಎಲ್ಲಾ ಸಚಿವರು ಭ್ರಷ್ಟಾಚಾರಾದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಭ್ರಷ್ಟಾಚಾರದ ಕ್ಯಾಪಿಟಲ್ ಎಂಬ ಹೆಸರು ಬಂದಿದೆ. ಪ್ರತಿಯೊಂದು ಹುದ್ದೆಗೂ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಿದ್ದಾರೆ. ಭ್ರಷ್ಟ ಸರ್ಕಾರದಿಂದ ನಮ್ಮ ಮರ್ಯಾದೆ ಹೋಗುತ್ತಿದೆ. ಕುಲಪತಿಯಾಗಲು ಹಣಕೊಟ್ಟ ಅಶೋಕ್ ಆತ್ಮಹತ್ಯೆ ಮಾಡಿಕೊಂಡರು. 40% ಕಮಿಷನ್ ಕೊಡಲು ಸಾಧ್ಯವಾಗದೇ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ರಾಜ್ಯದಲ್ಲಿ ಪಿ ಎಸ್ ಐ ಹುದ್ದೆ ನೇಮಕಾತಿ, ಶಿಕ್ಷಕರ ನೇಮಕಾತಿಯಲ್ಲಿ ಹಗರಣಗಳು ನಡೆದಿವೆ. ಒಂದೇ ಒಂದು ಪ್ರಕರಣಗಳ ಬಗ್ಗೆಯೂ ಸರ್ಕಾರಕ್ಕೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿ ಎಸ್ ಐ ನೇಮಕಾತಿ ಹುದ್ದೆಗೆ ಶಾಸಕರು ಲಂಚ ಪಡೆದಿದ್ದಾರೆ. ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಶಾಸಕರೇ ಹೇಳಿದರೂ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ 600 ಯೋಜನೆಗಳನ್ನು ಘೋಷಿಸಿದರು, ಸಬ್ ಅರ್ಬನ್ ಯೋಜನೆ, ನೀರಾವರಿ ಯೋಜನೆ, ರಾಷ್ಟ್ರೀಯ ಯೋಜನೆಗಳ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿದ್ದಾರಾ? ಒಂದೇ ಒಂದು ಭರವಸೆಯನ್ನು ಬಿಜೆಪಿ ಸರ್ಕಾರಕ್ಕೆ ಈಡೇರಿಸಲು ಆಗಿಲ್ಲ. ಅಧಿಕಾರಕ್ಕೆ ಬಂದು ಮೂರು ವರ್ಷಗಳು ಆದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಮಾಡಿಲ್ಲ ಆದರೆ ಜನರ ಕಣ್ಣಿಗೆ ಮಣ್ಣೆರಚುವ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರದ ಇನ್ನಷ್ಟು ಭ್ರಷ್ಟಾಚಾರವನ್ನು ಕಾಂಗ್ರೆಸ್ ಬಯಲಿಗೆಳೆಯಲಿದೆ ಎಂದು ಹೇಳಿದರು.