ವಿಜಯಪುರ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಮುರುಘಾ ಶ್ರೀಗಳನ್ನು ಬಂಧಿಸಲು ತಡವಾಗಿದ್ದೇಕೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳನ್ನು ಬಂಧಿಸಲು 6 ದಿನ ತಡ ಮಾಡಿದ್ದು ಯಾಕೆ? ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡವಿತ್ತು.ಇಬ್ಬರು ಮಾಜಿ ಸಿಎಂಗಳು ಶಿವಮೂರ್ತಿ ಶರಣರ ಪರಮ ಭಕ್ತರು. ಮಾಜಿ ಸಿಎಂ ಪುತ್ರ ಹೆಲಿಕಾಪ್ಟರ್ ನಲ್ಲಿ ಮುರುಘಾ ಮಠಕ್ಕೆ ಹೋಗುತ್ತಿದ್ದ ಎಂದು ಹೇಳಿದ್ದಾರೆ.
ಕೆಲ ಭ್ರಷ್ಟ ರಾಜಕಾರಣಿಗಳು ಮಠದಲ್ಲಿ ಹಣ, ದಾಖಲೆ ಪತ್ರಗಳನ್ನು ಇಟ್ಟಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮುರುಘಾ ಶರಣರ ಭಕ್ತರು. ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಹಾಗೂ ಮಠದ ವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ನ್ಯಾಯಾಧೀಶರಿಗೆ ಬರೆದಿರುವ ನನ್ನ ಪತ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಬಿಜೆಪಿಗೆ ಡ್ಯಾಮೇಜ್ ಆಗಿದ್ದರೆ ಅದು ವಿಜಯೇಂದ್ರರಿಂದ ಮಾತ್ರ. ವಿಜಯೇಂದ್ರ ಭ್ರಷ್ಟಾಚಾರದಿದಾಗಿಯೇ ಬಿಜೆಪಿ ಹೆಸರು ಕೆಟ್ಟಿದೆ. ಯಡಿಯೂರಪ್ಪ ಜೈಲಿಗೆ ಹೋಗಲು ವಿಜಯೇಂದ್ರ ಕಾರಣ ಎಂದು ಆರೋಪಿಸಿದ್ದಾರೆ.