ಹುಬ್ಬಳ್ಳಿ: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯ ಸುಳ್ಳಗ್ರಾಮದಲ್ಲಿ ನೆರವೇರಿದೆ.
ನಿನ್ನೆ ಹತ್ಯೆಯಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನೆರವೇರಿತು. ಬಳಿಕ ಹುಬ್ಬಳ್ಳಿಯ ಕೇಶ್ವಾಪುರದ ಬಳಿಯ ಸುಳ್ಳಾ ಗ್ರಾಮಕ್ಕೆ ಪಾರ್ಥಿವ ಶರಿರ ತರಲಾಯಿತು. ಬಳಿಕ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಚಂದ್ರಶೇಖರ್ ಗುರೂಜಿ ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಪಂಚಾಕ್ಷರಿ ಮಹಾಮಂತ್ರದೊಂದಿಗೆ ಕ್ರಿಯಾವಿಧಿ ನೆರವೇರಿತು. ಚಂದ್ರಶೇಖರ್ ಗುರೂಜಿ ಪತ್ನಿ ಅಂಕಿತಾ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ಬಳಿಕ ಗುರೂಜಿ ಪಾರ್ಥಿವಶರೀರವನ್ನು ಭೂತಾಯಿ ಒಡಲಲ್ಲಿ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸರಳವಾಸ್ತು ಮೂಲಕ ಮಾನವೀಯತೆಯ ಸಂದೇಶ ಸಾರಿದ್ದ ಚಂದ್ರಶೇಖರ್ ಗುರೂಜಿ ಭೂತಾಯಿ ಮಡಿಲಲ್ಲಿ ಲೀನವಾಗಿದ್ದಾರೆ. ಅಂತ್ಯಕ್ರಿಯೆಯಲ್ಲಿ ಗುರೂಜಿ ಕುಟುಂಬದವರು, ಭಕ್ತರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.