ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ʼಕಾಂತಾರಾʼ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುತ್ತಿರುವ ನಡುವೆಯೇ ಚಿತ್ರದಲ್ಲಿನ ಭೂತಕೋಲ, ದೈವಾರಾಧನೆ ವಿಚಾರವು ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಇದೀಗ ಭೂತಕೋಲ ವಿಚಾರವಾಗಿ ನಟ ಚೇತನ್ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗುತ್ತಿದೆ.
ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಅದು ಹಿಂದೂ ಧರ್ಮಕ್ಕಿಂತ ಹಿಂದಿನದ್ದು ಎಂದು ನಟ ಚೇತನ್ ತಿಳಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಬರುವ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ತಮ್ಮ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆಯನ್ನು ನೀಡಿರುವ ನಟ ಚೇತನ್, ಕಾಂತಾರಾ ಕನ್ನಡ ಚಲನಚಿತ್ರ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದುಕೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ನಮ್ಮ ಪಂಬದ ಎಂಬ ಪುಸ್ತಕದಲ್ಲಿ ಈ ಬಗ್ಗೆ ಮಾಹಿತಿ ಇದೆ. ನಮ್ಮ ಪಂಬದ, ನಲಿಕೆ, ಪರವರ ಇವು ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣ್ಯ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಭೂತಕೋಲ ಹಿಂದೂ ಸಂಸ್ಕೃತಿಯಲ್ಲಿ ಬರುತ್ತದೆ ಎಂದು ಹೇಳುವುದು ತಪ್ಪು. ಭೂತಕೋಲ ಪಂಬದ ಸಮುದಾಯದ ಆಚರಣೆ. ಭೂತಕೋಲದಲ್ಲಿ ಬ್ರಾಹ್ಮಣ್ಯ ಎಂಬುದು ಇಲ್ಲ. ಬ್ರಾಹ್ಮಣ್ಯವನ್ನು ಆದಿವಾಸಿ ಸಂಸ್ಕೃತಿ ಎನ್ನಲಾಗದು. ಕೊರಗ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯವಿದೆ. ಕೊರಗಜ್ಜ ಆದಿವಾಸಿ ಸಂಸ್ಕೃತಿಗೆ ಸೇರಿದ್ದಾನೆ. ಹಾಗೆ ಭೂತಕೋಲ ಎಂಬುದು ಪಂಬದ ಸಂಪ್ರದಾಯ ಹಿಂದೂ ಎಂಬ ಪದವನ್ನು ಯಾವ ರೀತಿ ಬಳಸುತ್ತೇವೆ ಎಂಬುದು ಮುಖ್ಯ ಎಂದು ವಿವರಿಸಿದ್ದಾರೆ.