ಉಡುಪಿ: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಭುಗಿಲೆದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಾಹಿತಿ ದೇವನೂರು ಮಹದೇವ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಅನಗತ್ಯವಾಗಿ ಸಂಬಂಧವೇ ಇಲ್ಲದ ಊಹಾಪೋಹಗಳನ್ನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸಾಹಿತಿ ದೇವನೂರು ಮಹದೇವ ಸೃಷ್ಟಿ ಮಾಡುತ್ತಿದ್ದಾರೆ. ರೋಹಿತ್ ಚಕ್ರತೀರ್ಥರಿಂದ ನಾಡಗೀತೆಗೆ ಅಪಮಾನ ವಿಚಾರವಾಗಿ ಮಾತನಾಡಿದ ಪ್ರತಾಪ್ ಸಿಂಹ, ವಾಟ್ಸಪ್ ಗೆ ಬಂದ ಸಂದೇಶ ಫೇಸ್ ಬುಕ್ ಗೆ ಹಾಕಿದ್ದಾರೆ. ಅದನ್ನು ಯಾರೋ ವ್ಯಂಗ್ಯ ಮಾಡಿದ್ದರು. ಅದು ತಪ್ಪು ಅದಕ್ಕೆ ಇಲ್ಲದ ಊಹಾಪೋಹ ಸೃಷ್ಟಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ದೇವನೂರು ಬಗ್ಗೆ ನನಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಕಾಂಗ್ರೆಸ್ ಪರ ಪ್ರಚಾರ ಬಿಟ್ಟು ಹಿಂದಿನ ಮಹದೇವರಾಗಿ. ಮತ್ತೆ ಪೆನ್ನು ಎತ್ತಿಕೊಂಡು ಅದ್ಭುತ ಕೃತಿ ರಚನೆ ಮಾಡಿ. ಪೆನ್ನು ಬಿಟ್ಟು ಮೈಕ್ ಗಳ ಮುಂದೆ ಬಂದು ನಿಂತಿರುವುದು ಯಾಕೆ? ಕಲಾಪಾನಿ ಶಿಕ್ಷೆ ಅನುಭವಿಸಿದವರು ಹೋರಾಟಗಾರರು. ಪುಣೆ ಪ್ಯಾಲೇಸ್ ನಲ್ಲಿ ಇದ್ದವರು ಹೋರಾಟಗಾರರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಮಸ್ಯೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಈ ಹಿಂದೆಯೇ ಹೇಳಲಾಗಿದೆ. ಆದರೆ ಅದನ್ನು ಬಿಟ್ಟು ಪಲಾಯನವಾದ ಅನುಸರಿಸುತ್ತಿದ್ದಾರೆ. ಬಹಿರಂಗ ಚರ್ಚೆಗೆ ಬರದೇ ಅನಗತ್ಯ ತಕರಾರು ಮಾಡುತ್ತಿದ್ದಾರೆ. ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು ಎಂದು ಕಿಡಿಕಾರಿದ್ದಾರೆ.