ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಯೂನಿಫಾರ್ಮ್ ವಿತರಣೆಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ರಾಜ್ಯದ ಜನತೆಯಲ್ಲಿ ಭಿಕ್ಷೆ ಬೇಡಿಯಾದರೂ ನಾವು ಮಕ್ಕಳಿಗೆ ಶೂ, ಸಾಕ್ಸ್ ಕೊಡಿಸುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೋವಿಡ್ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡಿದ್ರಲ್ಲ ಆ ಹಣ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಸಮವಸ್ತ್ರ, ಶೂ, ಸಾಕ್ಸ್ ಗಾಗಿ 132 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲಿಯೇ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ದೊರೆಯಲಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡದ ಬಗ್ಗೆ ಕಿಡಿ ಕಾರಿದ್ದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಈಗ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದು ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ. ಮಕ್ಕಳ ಬದುಕಿನ ವಿಚಾರ. ರಾಜ್ಯದ ಜನತೆಯಲ್ಲಿ ಭಿಕ್ಷೆ ಬೇಡಿಯಾದರೂ ನಾವು ಮಕ್ಕಳಿಗೆ ಶೂ, ಸಾಕ್ಸ್ ಕೊಡಿಸುತ್ತೇವೆ ಎಂದಿದ್ದರು.
ಮಕ್ಕಳು ಶೂ, ಸಾಕ್ಸ್ ಗಾಗಿ ಶಾಲೆಗೆ ಬರಲ್ಲ, ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಬರುತ್ತಾರೆ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಕಿಡಿಕಾರಿದ್ದ ಡಿ.ಕೆ.ಶಿವಕುಮಾರ್, ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಯೊಬ್ಬ ಪಾಲಕರೂ ತಮ್ಮ ಮಕ್ಕಳು ಶಿಸ್ತಿನಿಂದ ಶಾಲೆಗೆ ಓದಬೇಕು ಎಂದು ಸಾಲ ಮಾಡಿಯಾದರೂ ಬಟ್ಟೆ, ಶೂ, ಸಾಕ್ಸ್ ಕೊಡಿಸುತ್ತಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಯೋಜನೆ ಮೊದಲಿನಿಂದಲೂ ಇದೆ. ಶಿಕ್ಷಣ ಸಚಿವರು ಯಾಕೆ ಉತ್ತಮ ಬಟ್ಟೆ ಹಾಕಿಕೊಂಡು ಓಡಾಡಬೇಕು? ಅವ್ರು ಚಡ್ಡಿ-ಬನಿಯನ್ ನಲ್ಲಿ ಓಡಾಡಲಿ, ಹಾಗೇ ವಿಧಾನಸೌಧಕ್ಕೂ ಬರಲಿ ಎಂದು ವಾಗ್ದಾಳಿ ನಡೆಸಿದ್ದರು.