ದೇಶಾದ್ಯಂತ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಹಣದುಬ್ಬರದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ಕಿ ಮತ್ತು ಗೋಧಿಯಿಂದ ಹಿಡಿದು ದೈನಂದಿನ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಟೊಮೆಟೊ, ಹೂಕೋಸು, ಸೋರೆಕಾಯಿ, ಹಾಗಲಕಾಯಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ಸುಮಾರು ಶೇ.25 ರಿಂದ 50ರಷ್ಟು ಹೆಚ್ಚಳವಾಗಿದೆ.
ಹರ್ಯಾಣ, ಪಂಜಾಬ್, ಹಿಮಾಚಲ, ರಾಜಸ್ತಾನ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ಸರಿಯಾಗಿ ತರಕಾರಿ ಪೂರೈಕೆಯಾಗುತ್ತಿಲ್ಲ. ಮಳೆಯಿಂದಾಗಿ ಅವರೆಕಾಯಿ ಬೆಲೆ 250 ರೂಪಾಯಿ ದಾಟಿದೆ. ಟೊಮೆಟೋ ಕೂಡ ಸಾಕಷ್ಟು ದುಬಾರಿಯಾಗಿದೆ. ಕೆಜಿಗೆ 20 ರೂಪಾಯಿ ಇದ್ದ ಟೊಮೆಟೋ ದರ 60 ರೂಪಾಯಿಗೆ ತಲುಪಿದೆ.
ಆದ್ರೆ ಈರುಳ್ಳಿ, ಆಲೂಗೆಡ್ಡೆ ಬೆಲೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಈರುಳ್ಳಿ ಕೆಜಿಗೆ 25 ರೂಪಾಯಿ ಇದ್ರೆ, ಆಲೂಗಡ್ಡೆ 30-40 ರೂಪಾಯಿ ಇದೆ. ಬೀನ್ಸ್ ಅಂತೂ ಕೈಸುಡ್ತಾ ಇದ್ದು, ಕೆಜಿಗೆ 110 ರೂಪಾಯಿಗೆ ತಲುಪಿದೆ. ಸೌತೇಕಾಯಿ ಕೂಡ ಕೆಜಿಗೆ 60 ರೂಪಾಯಿ ಆಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ ಹಣ್ಣು ಕೂಡ ದುಬಾರಿಯಾಗಿದೆ. ಒಂದು ನಿಂಬೆ ಹಣ್ಣಿಗೆ 5 ರಿಂದ 7 ರೂಪಾಯಿ ಆಗಿದೆ.
ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆಯಾಗಿದೆ. ಎಲೆಕೋಸು 70-80 ರೂಪಾಯಿಗೆ ಮಾರಾಟವಾಗ್ತಿದೆ. ಹಾಗಲಕಾಯಿ ಬೆಲೆ ಕೂಡ ಕೆಜಿಗೆ 60 ರೂಪಾಯಿ ಆಗಿದೆ. ಬೆಲೆ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೇ ದುಸ್ತರವಾಗಿದೆ.