ಕಲಬುರ್ಗಿ: ಮಹಾ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡಗಳಿಗೂ ಕಂಟಕ ಎದುರಾಗಿದ್ದು, ವರುಣಾರ್ಭಟಕ್ಕೆ ಶಾಲೆಯ ಮೆಲ್ಛಾವಣಿಯೇ ಕುಸಿದು ಬಿದ್ದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ.
ಜೇವರ್ಗಿಯಲ್ಲಿ ಮಳೆ ಅವಾಂತರದಿಂದ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಮಕ್ಕಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಬೇರೊಂದು ಕೊಠಡಿಯಲ್ಲಿ ಪಾಠ ಹೇಳಿಕೊಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಶಾಲೆಯ ಮತ್ತೊಂದು ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಶಾಲಾ ಕೊಠಡಿಯಲ್ಲಿದ್ದ ಟೇಬಲ್, ಖುರ್ಚಿ ಸೇರಿದಂತೆ ಪೀಠೋಪಕರಣಗಳು ಸಂಪೂರ್ಣ ಹಾನಿಯಾಗಿದೆ. ಶಾಲಾ ಕಟ್ಟಡ ಸುಮಾರು 70 ವರ್ಷ ಹಳೆಯದಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಮಕ್ಕಳು ಹಾಗೂ ಶಿಕ್ಷಕರು ಪಾರಾಗಿದ್ದಾರೆ.