ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ವಿವಿಧ ಸಮುದಾಯಗಳು ಹಾಗೂ ಮೋರ್ಚಾ ಸಮಾವೇಶ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಹೆದರಿ, ಕಾಂಗ್ರೆಸ್ ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಿಜೆಪಿ ಸಮಾವೇಶಗಳನ್ನು ನಡೆಸಿಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಕಾಂಗ್ರೆಸ್ ಗೆ ಹೆದರಲು ಅವರೇನು ದೆವ್ವಾನಾ? ಭೂತಾನಾ? ಅವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಡಿಸೆಂಬರ್ ಅಂತ್ಯದೊಳಗೆ ಸಮಾವೇಶಗಳನ್ನು ನಡೆಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಪ್ರತಿ ಸಮುದಾಯವನ್ನೂ ಸಂಪರ್ಕಿಸುವ ನಿಟ್ಟಿನಲ್ಲಿ ಸಮಾವೇಶಗಳನ್ನು ನಡೆಸುವುದು ಉದ್ದೇಶವಾಗಿದೆ. ಬಿಜೆಪಿ ರೈತ, ಎಸ್ ಸಿ ಎಸ್ ಟಿ, ಓಬಿಸಿ, ಮಹಿಳಾ ಸಮಾವೇಶ, ಯುವ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಸಮಾವೇಶಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.