ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆಗೆ ಪರ್ಯಾಯವಾಗಿ ಇದೀಗ ಬಿಜೆಪಿ ಕೂಡ ಪಾದಯಾತ್ರೆಗೆ ಸಜ್ಜಾಗಿದೆ. ಶೀಘ್ರದಲ್ಲಿಯೇ ಬಿಜೆಪಿ ಯಾತ್ರೆ ಆರಂಭವಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಭಾರತ್ ಜೋಡೋ ಯಾತ್ರೆಗೆ ಪರ್ಯಾಯವಾಗಿ ಯಾತ್ರೆ ವಿಚಾರವಾಗಿ ಮಾತನಾಡುತ್ತಾ, ಮೊದಲು ನಾವೇ ಸಿದ್ಧತೆ ಮಾಡಿಕೊಂಡಿದ್ದೆವು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ನೇತೃತ್ವದಲ್ಲಿ ಯಾತ್ರೆ ಆರಂಭವಾಗಬೇಕಿತ್ತು. ಆದರೆ ದಸರಾ ಕಾರ್ಯಕ್ರಮ ಬಂದಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತವಾಯಿತು ಎಂದರು.
ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಗಾಂಧಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ , ಭಾರತ್ ಜೋಡೋಗೆ ಯಾರೇ ಬರಲಿ, ಇದು ಬಿಜೆಪಿ ಮೇಲೆ ಯಾವುದೇ ಪರಿಣಾಮವನ್ನೂ ಬೀರಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದರು.