ಬೆಂಗಳೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ, ಭಾರತದ ವಿಭಜನೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ ? ಎಂದು ಪ್ರಶ್ನಿಸಿದೆ.
ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ. ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರವೇ ಇದು ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡುವ ತಮಿಳುನಾಡಿನ ಜಾರ್ಜ್ ಎಂಬ ಪಾದ್ರಿಯನ್ನು ರಾಹುಲ್ ಭೇಟಿಯಾಗುತ್ತಾರೆ. ಭೇಟಿಯ ವೇಳೆ “ಜೀಸಸ್ ಮಾತ್ರ ನಿಜವಾದ ದೇವರು” ಎಂಬ ಪಾದ್ರಿಯ ಹೇಳಿಕೆಗೆ ತಲೆಯಾಡಿಸುತ್ತಾರೆ. ಚುನಾವಣೆ ವೇಳೆ ಟೆಂಪಲ್ ರನ್ ಮಾಡುವ ರಾಹುಲ್‌ಗೆ ಯಾತ್ರೆಯ ವೇಳೆ ಹಿಂದೂ ದೇವರು ನೆನಪಾಗಿಲ್ಲವೇಕೆ ?
ಕೇರಳದಲ್ಲೂ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಮುಂದುವರೆಸಿದರು. ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್ ಗಾಂಧಿ ಅವರ ಸಮ್ಮತಿಯಿದೆಯೇ ?
ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ. ಮತಾಂಧರ ಮೂಲಕ ಡಿಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್ ರಾಜ್, ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ್ದಾನೆ. ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು HinduVirodhiYatra ಎಂದು ಬದಲಾಯಿಸಿಕೊಳ್ಳಿ ಎಂದು ಕಿಡಿಕಾರಿದೆ.