ಏಷ್ಯಾದ ಶ್ರೀಮಂತ ಮಹಿಳೆ ಎಂಬ ಪಟ್ಟವನ್ನು ಚೀನಾದ ಯಾಂಗ್ ಹುಯಿಯಾನ್ ಕಳೆದುಕೊಂಡಿದ್ದಾರೆ. ಯಾಂಗ್ ಅವರ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಕಂಪನಿ ಸೇರಿದಂತೆ ಇತರ ಡೆವಲಪರ್‌ಗಳಿಗೆ ಆಸ್ತಿ ಬಿಕ್ಕಟ್ಟು ಎದುರಾಗಿರುವುದೇ ಇದಕ್ಕೆ ಕಾರಣ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಭಾರತದ ಸಾವಿತ್ರಿ ಜಿಂದಾಲ್ ಅವರು ಚೀನಾದ ಯಾಂಗ್ ಹುಯಿಯಾನ್‌ರನ್ನು ಹಿಂದಿಕ್ಕಿದ್ದಾರೆ. ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಂದಾಲ್ ಗ್ರೂಪ್, 11.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ.
ಯಾಂಗ್ ಹುಯಿಯಾನ್, ಸಹ ಚೀನಾದ ಉದ್ಯಮಿ ಫ್ಯಾನ್ ಹಾಂಗ್‌ವೀ ಅವರಿಗಿಂತಲೂ ಕೆಳಗಿನ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಫ್ಯಾನ್ ಹಾಂಗ್‌ವೀ, ಹೆಂಗ್ಲಿ ಪೆಟ್ರೋಕೆಮಿಕಲ್ ಎಂಬ ರಾಸಾಯನಿಕ-ಫೈಬರ್ ಕಂಪನಿಯನ್ನು ಹೊಂದಿದ್ದಾರೆ. 2005ರಲ್ಲಿ ತಂದೆಯ ರಿಯಲ್ ಎಸ್ಟೇಟ್ ಉದ್ಯಮದ ಚುಕ್ಕಾಣಿ ಹಿಡಿದಿದ್ದ ಯಾಂಗ್, ಜಗತ್ತಿನ ಅತಿ ಕಿರಿಯ ಬಿಲಿಯನೇರ್ ಎನಿಸಿಕೊಂಡಿದ್ದರು. ಕಳೆದ 5 ವರ್ಷಗಳಿಂದ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದರು.
ಕಂಪನಿಯ ಷೇರುಗಳ ಮೌಲ್ಯ ಕುಸಿತದಿಂದಾಗಿ ಸದ್ಯ ಯಾಂಗ್‌ರ ಒಟ್ಟಾರೆ ಆಸ್ತಿ 11 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ. 72 ವರ್ಷದ ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. 2005ರಲ್ಲಿ ಅವರ ಪತಿ ಓಪಿ ಜಿಂದಾಲ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಳಿಕ ಜಿಂದಾಲ್ ಗ್ರೂಪ್‌ನ ಚುಕ್ಕಾಣಿ ಹಿಡಿದಿದ್ದರು. ಕೋವಿಡ್ ಬಳಿಕ ಜಿಂದಾಲ್ ಗ್ರೂಪ್‌ನ ಒಟ್ಟಾರೆ ಆಸ್ತಿ ಮೌಲ್ಯ ಇಳಿಕೆಯಾಗಿತ್ತು. ಆದ್ರೆ 2022ರ ಎಪ್ರಿಲ್‌ನಲ್ಲಿ 15.6 ಬಿಲಿಯನ್ ಡಾಲರ್‌ಗೆ ತಲುಪಿತ್ತು.