ಸ್ವದೇಶಿ ಸೋಶಿಯಲ್ ಕಾಮರ್ಸ್ ಕಂಪನಿ ಮೀಶೋ, ಭಾರತದಲ್ಲಿ ತನ್ನ ದಿನಸಿ ವ್ಯಾಪಾರವನ್ನು ಬಂದ್ ಮಾಡಿದೆ. ಸೂಪರ್‌ಸ್ಟೋರ್ ಎಂದು ಕರೆಯಲ್ಪಡುವ ಈ ಸೇವೆ, ಭಾರತದ ಶೇಕಡಾ 90 ಕ್ಕಿಂತ ಹೆಚ್ಚು ನಗರಗಳಲ್ಲಿ, ನಾಗ್ಪುರ ಮತ್ತು ಮೈಸೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮುಚ್ಚಲ್ಪಟ್ಟಿದೆ. ಪರಿಣಾಮ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಮೀಶೋ ಸೂಪರ್‌ಸ್ಟೋರ್ ಮುಚ್ಚಿದ್ದರಿಂದ ಕಂಪನಿಯ ಸುಮಾರು 300 ಮೀಶೋ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಎಪ್ರಿಲ್‌ನಲ್ಲಿ ಮೀಶೋ ಸೂಪರ್ ಸ್ಟೋರ್ ಆರಂಭಿಸಿತ್ತು. ಆದ್ರೆ ಎಪ್ರಿಲ್ ತಿಂಗಳಿನಲ್ಲಿಯೇ 150ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಫಾರ್ಮಿಸೊದಿಂದ ಕಿರಾಣಿ ವ್ಯವಹಾರವನ್ನು ಕೋರ್ ಅಪ್ಲಿಕೇಶನ್‌ನಲ್ಲಿ ಸಂಯೋಜಿಸುವ ಗುರಿಯನ್ನು ಮೀಶೋ ಹೊಂದಿದೆ.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸಹ ಈ ಕಂಪನಿ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಆದಾಯ ಕೊರತೆ ಹಿನ್ನೆಲೆಯಲ್ಲಿ ಮೀಶೋ ಬಹುತೇಕ ನಗರಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಅಂತಾ ಹೇಳಲಾಗ್ತಿದೆ. ಮೀಶೋ ಸೂಪರ್‌ಸ್ಟೋರ್ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ 6 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಸೂಪರ್ ಸ್ಟೋರ್ ಬಂದ್ ಮಾಡಿ, ಕೆಲಸಗಾರರನ್ನು ಕಿತ್ತು ಹಾಕಿರೋ ಕಂಪನಿ ಅವರಿಗೆ 2 ತಿಂಗಳ ವೇತನವನ್ನು ನೀಡಿದೆ.
ಕಂಪನಿಯು ಮೀಶೋ ಸೂಪರ್‌ಸ್ಟೋರ್ ಅನ್ನು ತನ್ನ ಪ್ರಮುಖ ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲು ಮುಂದಾಗಿದೆ ಅಂತಾ ಸಂಸ್ಥಾಪಕ ಮತ್ತು ಸಿಇಓ ವಿದಿತ್ ಆತ್ರೆ ಹೇಳಿದ್ದಾರೆ. ಈ ರೀತಿಯ ಏಕೀಕರಣವು ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ ಎಂದಿದ್ದಾರೆ. ಆನ್‌ಲೈನ್ ದಿನಸಿ ಶಾಪಿಂಗ್ ಅನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮೀಶೋ ಕರ್ನಾಟಕದಲ್ಲಿ ಸೂಪರ್ ಸ್ಟೋರ್ ಆರಂಭಿಸಿತ್ತು.
2022 ರ ಅಂತ್ಯದ ವೇಳೆಗೆ 12 ರಾಜ್ಯಗಳಲ್ಲಿ ಸೂಪರ್‌ಸ್ಟೋರ್ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಮೀಶೋ ಇತ್ತೀಚೆಗಷ್ಟೆ 100 ಮಿಲಿಯನ್ ವಹಿವಾಟು ಬಳಕೆದಾರರನ್ನು ತಲುಪಿದೆ. ಮಾರ್ಚ್ 2021 ರಿಂದ ಈ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟು ನಡೆಸುವ ಬಳಕೆದಾರರ ಸಂಖ್ಯೆ 5.5 ಪಟ್ಟು ಹೆಚ್ಚಾಗಿದೆ.