ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳು ಹಠಾತ್ ಏರಿಕೆಯಾಗಿವೆ. ಸೋಮವಾರ ಒಟ್ಟಾರೆ ಸೋಂಕಿನ ಪ್ರಕರಣಗಳು ಡಬಲ್ ಆಗಿವೆ. ಕಳೆದೊಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ 2000 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕೇರಳದಲ್ಲಿ ಕೋವಿಡ್ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಕೊರೊನಾ ಸೋಂಕು ಅಪಾರ ಸಾವು ನೋವಿಗೆ ಕಾರಣವಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಸೋಂಕು ಕಡಿಮೆಯಾಗಿತ್ತು. ಹಾಗಾಗಿ ಎಷ್ಟೋ ರಾಜ್ಯಗಳಲ್ಲಿ ಮಾಸ್ಕ್ ಸೇರಿದಂತೆ ಇತರ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಆದ್ರೀಗ ಮತ್ತೆ ಸೋಂಕು ಹೆಚ್ಚಳವಾಗ್ತಿರೋದು ಆತಂಕ ಮೂಡಿಸಿದೆ.
ದೆಹಲಿ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸೋಂಕು ಕೊಂಚ ಹೆಚ್ಚಾಗಿದೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಸೋಮವಾರ 2,183 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. 214 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ 13 ರಿಂದ ಕೇರಳ ಕೋವಿಡ್ ಸಾವಿನ ಪ್ರಕರಣಗಳ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ.
ಕೊರೊನಾ ಸಾವಿನ ಸಂಖ್ಯೆಯೂ ದಿಢೀರ್ ಏರಿಕೆಯಾಗಿರೋದ್ರಿಂದ ಎಲ್ಲಾ ರಾಜ್ಯಗಳೂ ಪ್ರತಿದಿನ ಅಂಕಿ-ಅಂಶಗಳನ್ನು ಕಡ್ಡಾಯವಾಗಿ ಕಳುಹಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಇದುವರೆಗೆ 5,22,000 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4 ಮಿಲಿಯನ್‌ಗಿಂತಲೂ ಹೆಚ್ಚಿರಬಹುದು ಎಂದು ಜಾಗತಿಕ ತಜ್ಞರು ಹೇಳಿದ್ದಾರೆ.