ಭಾರತದ ಆಕಾಶದಲ್ಲಿ ಹಾರುವ ಟ್ಯಾಕ್ಸಿಗಳನ್ನು ನೋಡುವ ದಿನ ದೂರವೇನಿಲ್ಲ. ಈ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ತಯಾರಿಸಲು ಇಪ್ಲೇನ್ ಕಂಪನಿ ಮುಂದಾಗಿದೆ. ಇನ್ನೆರಡು ವರ್ಷಗಳಲ್ಲಿ ಹಾರುವ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ.
ಪ್ರೊಫೆಸರ್ ಗಳಾದ ಸತ್ಯ ಚಕ್ರವರ್ತಿ ಹಾಗೂ ಪ್ರಾಂಜಲ್ ಮೆಹ್ತಾ ಹುಟ್ಟುಹಾಕಿರುವ ಕಂಪನಿ ಇದು. ವಿಮಾನಗಳಂತೆ ಟೇಕಾಫ್, ಲ್ಯಾಂಡ್ ಆಗುವ ವಿದ್ಯುತ್ ಚಾಲಿತ ಟ್ಯಾಕ್ಸಿಗಳನ್ನು ತಯಾರಿಸಲು ಇವರು ಸಾಕಷ್ಟು ಶ್ರಮಿಸ್ತಿದ್ದಾರೆ.
ಈ ಹಾರುವ ಟ್ಯಾಕ್ಸಿಗೆ ಇ200 ಎಂದು ಹೆಸರಿಡಲಾಗುತ್ತದೆ. ಊಬರ್ ಪ್ರಯಾಣಕ್ಕೆ ಹೋಲಿಸಿದ್ರೆ ಇದರ ವೇಗ 10 ಪಟ್ಟು ಹೆಚ್ಚಾಗಿರುತ್ತದೆ. ವೆಚ್ಚ ಡಬಲ್ ಆಗಲಿದೆ. ಡ್ರೋನ್ ನಂತೆ ಟೇಕಾಫ್ ಆಗುವ ಈ ಟ್ಯಾಕ್ಸಿ ವಿಮಾನದ ರೀತಿಯಲ್ಲೇ ಲ್ಯಾಂಡ್ ಆಗಲಿದೆ ಅಂತಾ ಇಪ್ಲೇನ್ ಕಂಪನಿ ತಿಳಿಸಿದೆ.
ಇದಕ್ಕೆ ಹೆಲಿಪ್ಯಾಡ್ ಅಥವಾ ರನ್ ವೇ ಬೇಕಾಗಿಲ್ಲ. 2-3 ಬೆಡ್ ರೂಮ್ ಅಪಾರ್ಟ್ಮೆಂಟ್ ನ ಮಹಡಿ ಮೇಲಿಂದ ಇದನ್ನು ಹಾರಿಸಬಹುದು. ಯುರೋಪ್, ಚೀನಾ ಹಾಗೂ ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. 2024ರ ಅಂತ್ಯದ ವೇಳೆಗೆ ಈ ಟ್ಯಾಕ್ಸಿಗಳನ್ನು ಮಾರುಕಟ್ಟೆಗೆ ತರುವ ವಿಶ್ವಾಸ ಇಪ್ಲೇನ್ ಗಿದೆ.
ಪೈಲಟ್ ಹಾಗೂ ಓರ್ವ ಪ್ರಯಾಣಿಕ ಮಾತ್ರ ಇದರಲ್ಲಿ ಕುಳಿತುಕೊಳ್ಳಬಹುದು. 2 ಮೀಟರ್ ಉದ್ದದ ರೆಕ್ಕೆಗಳು ಈ ಟ್ಯಾಕ್ಸಿಗೆ ಇರುತ್ತವೆ. ಟ್ರಾಫಿಕ್ ಸಮಸ್ಯೆ ಇರುವ ನಗರಗಳಿಗೆ ಈ ಹಾರುವ ಟ್ಯಾಕ್ಸಿಗಳಿಂದ ಅನುಕೂಲವಾಗುವ ನಿರೀಕ್ಷೆ ಇದೆ.
ಆರಂಭದಲ್ಲಿ 100 ಹಾರುವ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬೆಂಗಳೂರು ಮತ್ತು ಮುಂಬೈ ಮಾರುಕಟ್ಟೆಗೆ ಇವು ಮೊದಲು ಎಂಟ್ರಿ ಕೊಡಲಿವೆ.