ಪಾಕಿಸ್ತಾನದ ISI ಏಜೆಂಟ್ ಆಗಿದ್ದ ವ್ಯಕ್ತಿಯನ್ನು ನೇಪಾಳದ ಕಠ್ಮಂಡುವಿನಲ್ಲಿ ಹತ್ಯೆ ಮಾಡಲಾಗಿದೆ. ಆತನ ಅಡಗುತಾಣದ ಹೊರಭಾಗದಲ್ಲೇ ಸೆಪ್ಟೆಂಬರ್ 19 ರಂದು ಗುಂಡಿಕ್ಕಿ ಕೊಲ್ಲಲಾಗಿದೆ. ಹತ್ಯೆಯಾದ ಲಾಲ್ ಮೊಹಮ್ಮದ್ ಅಲಿಯಾಸ್ ಮೊಹಮ್ಮದ್ ದರ್ಜಿ, ISIನ ನಕಲಿ ನೋಟುಗಳನ್ನು ಭಾರತಕ್ಕೆ ಪೂರೈಸ್ತಾ ಇದ್ದ.
ಈತನನ್ನು ಹೊಡೆದುರುಳಿಸಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪರಿಚಿತರು ಐಎಸ್ಐ ಏಜೆಂಟ್ ಮೇಲೆ ಗುಂಡು ಹಾರಿಸಿದ್ದಾರೆ. ಹತ್ಯೆಯಾದ ಲಾಲ್ ಮೊಹಮ್ಮದ್‌ಗೆ 55 ವರ್ಷವಾಗಿತ್ತು. ಐಎಸ್‌ಐ ಸೂಚನೆ ಮೇರೆಗೆ ಈತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತದ ನಕಲಿ ಕರೆನ್ಸಿಯನ್ನು ಪಡದು ನೇಪಾಳಕ್ಕೆ ಸಾಗಿಸುತ್ತಿದ್ದ. ಅಲ್ಲಿಂದ ಅದನ್ನು ಭಾರತಕ್ಕೆ ಸರಬರಾಜು ಮಾಡುತ್ತಿದ್ದ. ಅಧಿಕಾರಿಗಳ ಪ್ರಕಾರ, ಲಾಲ್ ಮೊಹಮ್ಮದ್ ಐಎಸ್‌ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಸಹಾಯ ಮಾಡಿದ್ದಾನೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‌ನೊಂದಿಗೆ ಕೂಡ ಈತ ಸಂಪರ್ಕ ಹೊಂದಿದ್ದ. ಇತರ ಐಎಸ್‌ಐ ಏಜೆಂಟ್‌ಗಳಿಗೂ ಆಶ್ರಯ ನೀಡಿದ್ದ.
ಸಿಸಿ ಟಿವಿ ದೃಶ್ಯಾವಳಿಯಲ್ಲೇನಿದೆ ?
ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿ ಲಾಲ್ ಮೊಹಮ್ಮದ್ ತನ್ನ ಮನೆಯ ಹೊರಗೆ ಐಷಾರಾಮಿ ಕಾರಿನಿಂದ ಕೆಳಗಿಳಿದಿದ್ದ. ಕೆಲವೇ ಕ್ಷಣಗಳಲ್ಲಿ ಇಬ್ಬರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಲಾಲ್ ಮೊಹಮ್ಮದ್ ತನ್ನ ಕಾರಿನ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ ದಾಳಿಕೋರರು ಸುಮ್ಮನಾಗಿಲ್ಲ. ಲಾಲ್ ಮೊಹಮ್ಮದ್ನ ಮಗಳು ತನ್ನ ತಂದೆಯನ್ನು ರಕ್ಷಿಸಲು ಮನೆಯ ಮೊದಲ ಮಹಡಿಯಿಂದ ಜಿಗಿದಿದ್ದಾಳೆ. ಆಕೆ ತಂದೆಯ ಬಳಿ ತಲುಪುವಷ್ಟರಲ್ಲಿ ಆತ ಹತ್ಯೆಯಾಗಿದ್ದ. ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ.