ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಲ್ಲಾ ಭಯೋತ್ಪಾದಕರನ್ನು ವಿರೋಧಿಸುತ್ತೇವೆ ಎಂದು ತಾವು ಹೇಳುತ್ತಿದ್ದೀರಿ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಭಯೋತ್ಪಾದನೆಗೆ ಪ್ರಾಣ ತೆತ್ತರು ಎಂದೂ ಹೇಳುತ್ತಿದ್ದೀರಿ. ಆದರೆ ಅವರನ್ನು ಬಲಿಪಡೆದ ಭಯೋತ್ಪಾದನೆಗೆ ಚಾಲನೆ ನೀಡಿದ್ದು ಯಾರು? ಯಾವ ಉದ್ದೇಶಕ್ಕೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.
ತನ್ನ ರಾಜಕಾರಣಕ್ಕೆ ಭಿಂದ್ರನ್‌ವಾಲೆಯನ್ನು ಬಳಸಿಕೊಂಡದ್ದು ಇಂದಿರಾಗಾಂಧಿ. ತಾವೇ ಬೆಳೆಸಿದ ಖಲಿಸ್ತಾನ ಬಂಡುಕೋರನ ಸದೆಬಡಿಯಲು ಅಮೃತಸರದ ಸ್ವರ್ಣ ಮಂದಿರಕ್ಕೆ ಸೇನೆ ಕಳುಹಿಸಬೇಕಾಗಿ ಬಂದದ್ದು ವಿಪರ್ಯಾಸ. ಕೆಟ್ಟ ರಾಜಕಾರಣ ಕೆಟ್ಟ ಸಂದರ್ಭಗಳನ್ನು ತಂದೊಡ್ಡುತ್ತವೆ ಎಂಬುದು ಕಾಂಗ್ರೆಸ್ ಗೆ ಮರೆತಿರಬಹುದು. ತಾನೇ ಭಿಂದ್ರನ್‌ವಾಲೆಯನ್ನು ಪೋಷಿಸಿ ನಂತರ ತಾನೇ ಸಂಹರಿಸಿದ ಇಂದಿರಾ ಗಾಂಧಿ ನಡೆಯ ಬಗ್ಗೆ ಸಿಖ್ ಜನಾಂಗದ ವಲಯದಲ್ಲಿ ವಿರೋಧವಿತ್ತು. ಆ ವಿರೋಧದ ಪರಾಕಾಷ್ಟೆಗೆ ಅವರು ಬಲಿಯಾದರು. ಆದರೆ ನಂತರ ಸಾವಿರಾರು ಜನರ ಪ್ರಾಣ ತೆಗೆದ ಸಿಖ್ ಮಾರಣಹೋಮದ ಸೂತ್ರಧಾರಿಗಳು ಯಾರು?
ನಮ್ಮ ಇನ್ನೊಬ್ಬ ಪ್ರಧಾನಿಯವರನ್ನು ಬಲಿತೆಗೆದುಕೊಂಡದ್ದು ಎಲ್‌ಟಿಟಿಇ. ಆದರೆ ಎಲ್‌ಟಿಟಿಇ ಸ್ಥಾಪನೆಗೆ ಸಹಾಯ ಮಾಡಿದ್ದು ಯಾರು ಎಂದು ಹುಡುಕಿದರೆ ಬಾಣ ಪುನಃ ಕಾಂಗ್ರೆಸ್ ಕಡೆಗೇ ತಿರುಗುತ್ತದೆ ಎಂಬುದನ್ನು ಕಾಂಗ್ರೆಸ್ ನವರು ಅರ್ಥಮಾಡಿಕೊಳ್ಳಬೇಕು. ಪ್ರಭಾಕರನ್‌ನನ್ನು ಪೋಷಿಸಿ ಬೆಳೆಸಿದ್ದು ಯಾರು? ಬಂಡುಕೋರರನ್ನು ಬೆಳೆಸುವ ಮೂಲಕ ನೆರೆದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಇಂದಿರಾ ಗಾಂಧಿಯವರ ಸೂತ್ರ. ಎಲ್‌ಟಿಟಿಇ ಸಕ್ರಿಯವಾಗಿದ್ದರೆ ಶ್ರೀಲಂಕಾವನ್ನು ನಿಯಂತ್ರಿಸಲು ಸುಲಭ ಎಂಬುದು ಅವರ ಲೆಕ್ಕಾಚಾರ. ಹಾಗಾಗಿ ಎಲ್‌ಟಿಟಿಇ ಸಂಘಟನೆಯನ್ನು ಭಾರತದ ಒಳಕ್ಕೇ ಕರೆಸಿ ಶಸ್ತ್ರಾಸ್ತ್ರ ಪೂರೈಸಿ ತರಬೇತಿ ಕೊಡಿಸಿದರು ಎಂದು ವಾಗ್ದಾಳಿ ನಡೆಸಿದೆ.
ಶ್ರೀಲಂಕಾ ಸೇನೆ ಜತೆ ಎಲ್‌ಟಿಟಿಇ ಯುದ್ಧ ಮಾಡಿದಾಗಲೆಲ್ಲ ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾತ್ರವಲ್ಲ, ಅಗತ್ಯ ವೈದ್ಯಕೀಯ ನೆರವೂ ಸಿಗುತ್ತಿದುದು ಭಾರತದಲ್ಲಿಯೇ. ಅವರ ನಿತ್ಯದ ಆಗುಹೋಗು ವರದಿಯಾಗುತ್ತಿದ್ದದ್ದು ಕಾಂಗ್ರೆಸ್ ಪಕ್ಷಕ್ಕೇ. ತಾವು ಈಗ ಇರುವಂಥದ್ದು ಭಯೋತ್ಪಾದನೆಯ ನಿತ್ಯದ ಲೆಕ್ಕ ಇಟ್ಟ ಪಕ್ಷ ಸಿದ್ದರಾಮಯ್ಯನವರೆ ಎಂದು ಹಿಗ್ಗಾ ಮುಗ್ಗಾ ಟೀಕಿಸಿದೆ.
ಆದರೆ ಆ ರೀತಿ ಇದ್ದ ಸಂಬಂಧವನ್ನು ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬುದು ಎಲ್‌ಟಿಟಿಇಗೆ ಅವರ ಮೇಲೆ ಇದ್ದ ಕೋಪ. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿ ಭಾರತದ ಗುಪ್ತಚರ ಸಂಸ್ಥೆ ಜತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ದು ರಾಜೀವ್ ಗಾಂಧಿಯವರು. ವಿಷ ಸರ್ಪದ ಜತೆ ಪಗಡೆಯಾಟ ಆಡಿದಂತೆ ಭಯೋತ್ಪಾದನೆ ಜತೆಗೆ ಕೈ ಮಿಲಾಯಿಸಿದ ಇತಿಹಾಸ ಇರುವುದೇ ಕಾಂಗ್ರೆಸ್ ನಲ್ಲಿ. ಅದೇ ವಿಚಾರಕ್ಕೆ ಕೊನೆಗೆ ದುರಾದೃಷ್ಟವಶಾತ್ ರಾಜೀವ್ ಗಾಂಧಿಯವರ ಹತ್ಯೆಯಾಯಿತು ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.