ಕಲಬುರ್ಗಿ: ಭಗತ್ ಸಿಂಗ್ ಪಾಠ ಕೈಬಿಟ್ಟು ಹೆಡ್ಗೆವಾರ್ ನ್ನು ಪಠ್ಯದಲ್ಲಿ ಸೇರಿಸಿದರು ಈ ಬಗ್ಗೆ ಪ್ರಶ್ನೆ ಮಾಡಿದರೆ ದೇಶದ್ರೋಹವೇ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶ ದ್ರೋಹಿಗಳು ಯಾರು ? ನಾವಾ ? ಬಿಜೆಪಿಯವರಾ ? ಭಗತ್ ಸಿಂಗ್ ಪಾಠ ಪಠ್ಯದಿಂದ ಕೈಬಿಟ್ಟಿದ್ದರು. ಪಠ್ಯದಿಂದ ಯಾಕೆ ತೆಗೆದಿದ್ದೀರಿ ಎಂದು ಕೇಳಿದರೆ ದೇಶದ್ರೋಹನಾ ? ವಿರೋಧ ವ್ಯಕ್ತವಾದ ಮೇಲೆ ಇದೀಗ ಮತ್ತೆ ಸೇರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಡ್ಸೆ, ಹೆಡ್ಗೆವಾರ್ ಇಬ್ಬರೂ ಆರ್.ಎಸ್.ಎಸ್. ನವರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹೆಡ್ಗೆವಾರ್ ಪಾತ್ರವೇನು ? ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಬೇಕು. ಅದನ್ನು ಬಿಟ್ಟು ಹೆಡ್ಗೆವಾರ್, ಗೋಡ್ಸೆ ಪಾಠ ಮಕ್ಕಳಿಗೆ ಹೇಳುಕೊಡುತ್ತಾರೆಯೇ ? ಎಂದು ರಾಜ್ಯ ಸರ್ಕಾರದ ಕ್ರಮಕ್ಕೆ ಕಿಡಿಕಾರಿದರು.
ಇದೇ ವೇಳೆ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅವಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಡೀ ಬೆಂಗಳೂರು ಚಿತ್ರಣವನ್ನೇ ಬದಲಿಸುತ್ತೀವಿ ಎಂದರು. ಈಗ ಏನಾಗಿದೆ ನೋಡಿ. 1,500 ಕೋಟಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದರು ಬೆಂಗಳೂರಿಗೆ ನಯಾ ಪೈಸೆ ನೀಡಿಲ್ಲ. ಈಗ 1,600 ಕೋಟಿ ಕೊಡ್ತಿವಿ ಅಂತಿದ್ದಾರೆ. ಮೊದಲು ಮಳೆಯಿಂದ ಹಾನಿಗೊಳಗಾದ ಜನರಿಗೆ ಪರಿಹಾರ ನೀಡಲಿ. ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅಲ್ಲ ಎಲ್ಲರಿಗೂ ಪರಿಹಾರ ಕೊಡಲಿ ಎಂದು ಆಗ್ರಹಿಸಿದರು.