ಗೋಕರ್ಣ: ನಾನು ಬ್ರಾಹ್ಮಣ ಸಮುದಾಯದ ವಿರೋಧಿಯಲ್ಲ. ನನ್ನ ಹೇಳಿಕೆಯನ್ನು ಅನಗತ್ಯವಾಗಿ ಬಿಜೆಪಿ ನಾಯಕರು ವಿವಾದಕ್ಕೀಡು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಕ್ಕೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿಯವರಿಗೆ ದೇವಸ್ಥಾನದ ಅರ್ಚಕರು ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ನಮಗೆ ನಿಮ್ಮ ಕುಟುಂಬದ ಬಗ್ಗೆ ಅಭಿಮಾನವಿದೆ. ಗೋಕರ್ಣದಲ್ಲಿ ನಿಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿ ಎಂದು ಕೇಳಿದ್ದಾರೆ.
ಅರ್ಚಕರ ಹೇಳಿಕೆಗೆ ಉತ್ತರಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಬ್ರಾಹ್ಮಣ ಸಮುದಾಯಯದ ವಿರೋಧಿಯಲ್ಲ ಎಂದು ತಿಳಿಸಿದ್ದಾರೆ.
ನಾನು ಹಿಂದೂಗಳ ರಕ್ಷಣೆ ಮಾಡುತ್ತೇವೆ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಗೊತ್ತಿದೆ. ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ. ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಹೆಚ್.ಡಿ. ದೇವೇಗೌಡರು. ನಾನು ಸಿಎಂ ಆಗಿದ್ದಾಗ ಬ್ರಾಹ್ಮಣರ ಭವನ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೆ. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾನು ಎಂದು ಹೇಳಿದರು.
ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿ ? ನಳೀನ್ ಕುಮಾರ ಕಟೀಲ್ ಗೆ ರಾಜಕೀಯದ ಬಗ್ಗೆ ಏನು ಗೊತ್ತಿದೆ ? ಚುನಾವಣೆ ವೇಳೆ ಕೆಲವರು ಪಕ್ಷ ಬಿಟ್ಟು ಹೋಗೋದು ಸಹಜ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬುದನ್ನು ರಾಜ್ಯದ ಜನ ನಿರ್ಧಾರ ಮಾಡ್ತಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.