ಪ್ರವಾದಿ ಮಹಮದ್ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು ಬರ್ಬರವಾಗಿ ಹತ್ಯೆಗೈದು ಮುಸ್ಲಿಂ ಮೂಲಭೂತವಾದಿಗಳು ಅಟ್ಟಹಾಸ ಮೆರೆದಿದ್ದರು. ಅಲ್ಲದೆ ತಮ್ಮ ಈ ಪೈಶಾಚಿಕ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಉದಯ್ಪುರ ನಗರದ ಧನ್ ಮಂಡಿ ಪ್ರದೇಶದಲ್ಲಿದ್ದ ಕನ್ನಯ್ಯ ಲಾಲ್ ಅವರ ಟೈಲರ್ ಅಂಗಡಿಗೆ ಗ್ರಾಹಕರಂತೆ ಬಂದಿದ್ದ ರಿಯಾಜ್ ಆಕ್ತಾರಿ ಮತ್ತು ಗೌಸ್ ಮಹಮ್ಮದ್ ಎಂಬ ಈ ಹಂತಕರು ಅಳತೆ ತೆಗೆದುಕೊಳ್ಳುವಾಗಲೇ ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದರು. ಅದರಲ್ಲಿ ಒಬ್ಬಾತ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಹತ್ಯೆ ಮಾಡಿದ ಬಳಿಕ ಮತ್ತೊಂದು ವಿಡಿಯೋ ಮಾಡಿದ್ದ ಇವರುಗಳು ಪ್ರಧಾನಿ ನರೇಂದ್ರ ಮೋದಿಯವರಿಗೂ ಜೀವ ಬೆದರಿಕೆ ಹಾಕಿದ್ದರು.
ಬಳಿಕ ಇವರುಗಳು ಪೂರ್ಣವಾಗಿ ಮುಖ ಮುಚ್ಚಿದ ಹೆಲ್ಮೆಟ್ ಹಾಕಿಕೊಂಡು ಬೈಕಿನಲ್ಲಿ ಪರಾರಿಯಾಗಿಲು ಯತ್ನಿಸುತ್ತಿದ್ದ ವೇಳೆ ರಾಜಸ್ಥಾನ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅವರುಗಳನ್ನು ಬಂಧಿಸಿದ್ದಾರೆ. ಈ ಬಂಧನ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕೋ-ಆರ್ಡಿನೇಟರ್ ನಿತಿನ್ ಅಗರ್ವಾಲ್ ಎಂಬವರು ಟ್ವೀಟ್ ಮಾಡಿದ್ದಾರೆ.