ಬೆಂಗಳೂರು: ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ಎಂಡಿ, ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಅಸಮಾಧಾನ ಮುಂದುವರೆದಿದ್ದು, ರಾಘವೇಂದ್ರ ಶೆಟ್ಟಿ ವಿರುದ್ಧ ವಾರಂಟ್ ಜಾರಿ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ 2019ರಿಂದ ಕೋರ್ಟ್ ನೀಡಿದ್ದ ಹಲವು ವಾರಂಟ್ ಗಳನ್ನು ಜಾರಿ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ನ್ಯಾಯಾಲಯವು ರಾಘವೇಂದ್ರ ಶೆಟ್ಟಿ ಬಂಧಿಸುವಂತೆ ಇನ್ಸ್ ಪೆಕ್ಟರ್ ಹಾಗೂ ಕಮಿಷ್ನರ್ ಅವರಿಗೆ ಆದೇಶಿಸಿದೆ. ಆದರೆ ಪೊಲೀಸರು ರಾಘವೇಂದ್ರ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಅವರು ನಿನ್ನೆವರೆಗೂ ನಿಗಮದ ಅಧ್ಯಕ್ಷರಾಗಿದ್ದರು. ಇದನ್ನು ಗಮನಿಸಬೇಕು ಎಂದು ಡಿ.ರೂಪಾ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಾರಂಟ್ ಜಾರಿಗೆ ವಿಫಲರಾದ ಪೊಲೀಸರ ವಿರುದ್ಧ ಐಪಿಸಿ ಸೆಕ್ಷನ್ 166, 166ಎ, 166ಬಿ ಅನ್ವಯ ಶಿಕ್ಷೆ ವಿಧಿಸಬಹುದು. ಓರ್ವ ವ್ಯಕ್ತಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಪೊಲೀಸರು ಆತ ತಲೆಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೂರು ನೀಡಿದ 65 ವರ್ಷದ ಹಿರಿಯ ನಾಗರಿಕರಿಗೆ ಇಂದಿಗೂ ರಾಘವೇಂದ್ರ ಶೆಟ್ಟಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.