ಮೈಸೂರು: ಹಿಜಾಬ್ ವಿಚಾರವಾಗಿ ಇದೀಗ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್ ವಾಕ್ಸಮರ ತಾರಕಕ್ಕೇರಿದ್ದು, ಬೇರೆ ದೇಶಕ್ಕೆ ಹೋಗೆಂದು ವೀಸಾ ಕೊಡಲು ಈ ದೇಶ ನಿಮ್ಮ ತಾತಂದಾ? ಎಂದು ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.
ಹಿಜಾಬ್ ಗೆ ಅವಕಾಶ ಕೊಡಬೇಕು ಅದು ನಮ್ಮ ಹಕ್ಕು ಎಂದು ಹೇಳುವುದಾದರೆ ಈ ದೇಶವನ್ನು ಎರಡು ಭಾಗ ಮೂರು ಭಾಗ ಮಾಡಿ ಈ ಹಿಂದೆ ನಿಮಗೆ ಒಂದು ಭಾಗ ಕೊಟ್ಟೆವು. ಆಗ ಅಲ್ಲೇ ಹೋಗಬೇಕಿತ್ತು, ಇಲ್ಲೇಕೆ ಇದ್ದೀರಿ? ಅಲ್ಲಿ ನಿಮ್ಮ ಹಿಜಾಬ್ ನಡೆಸಬಹುದು… ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ತನ್ವೀರ್ ಸೇಠ್, ನಾವು ಕೂಡ ಈ ದೇಶದಲ್ಲಿಯೇ ಹುಟ್ಟಿದ್ದೇವೆ. ಈ ದೇಶದಲ್ಲಿಯೇ ಬೆಳೆದಿದ್ದೇವೆ. ಇನ್ಮುಂದೆ ಈ ದೇಶದಲ್ಲಿಯೇ ಸಾಯುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲಿನ ನಾಗರಿಕತೆಗೆ ಹೊಂದಿಕೊಂಡಿದ್ದೇವೆ. ನಮ್ಮೆಲ್ಲರ ಜವಾಬ್ದಾರಿ ದೇಶ ಕಟ್ಟುವುದು ಹೊರತು ಒಡೆಯುವುದಲ್ಲ ಎಂದು ಹೇಳಿದರು.
ಉಳಿತಾಯ ಖಾತೆಗೆ ಈ ಬ್ಯಾಂಕ್ ನೀಡ್ತಿದೆ ಶೇ.7 ರ ಬಡ್ಡಿದರ..!
ದೇಶವನ್ನು ವಿಭಜನೆ ಮಾಡಿ ಅಂದೇ ನಿಮಗೂ ಒಂದು ಭಾಗ ಕೊಟ್ಟಿದ್ದೇವೆ ಎನ್ನುವಂತಹ ಮಾತನಾಡಲು ಇವರು ಯಾರು? ಈ ದೇಶ ನಿಮ್ಮ ತಾತಂದಾ? ನೀವು ಹೇಗೆ ಈ ದೇಶದಲ್ಲಿ ಹುಟ್ಟಿ ಬೆಳೆದಿದ್ದೀರಿ ಹಾಗೆ ನಾವೂ ಕೂಡ ಈ ದೇಶದಲ್ಲಿ ಹುಟ್ಟಿದ್ದೇವೆ. ನಾವು ಕೂಡ ಇದೇ ದೇಶದ ಪ್ರಜೆಗಳು. ಓರ್ವ ಚುನಾಯಿತ ಜನಪ್ರತಿನಿಧಿಯಾಗಿ ಆಡುವ ಮಾತೇ ಇದು? ಪ್ರತಾಪ್ ಸಿಂಹ ಜವಾಬ್ದಾರಿಯುತವಾಗಿ ಮಾತನಾಡಲಿ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತನಾಡುತ್ತಾ ಹೋಗುವುದಲ್ಲ ಎಂದು ಕಿಡಿಕಾರಿದರು.
ಜನರ ಭಾವನೆಗಳನ್ನು ಕೆಡಿಸುವಂತಹ ಮಾತುಗಳು ಬೇಡ. ಚರ್ಚೆ ಮಾಡಬೇಕಾ ಕುಳಿತು ಮಾತನಾಡೋಣ. ಆದರೆ ಇಂತಹ ರಾಜಕಾರಣದ ಹೇಳಿಕೆಗಳು ಸರಿಯಲ್ಲ. ಹಿಜಾಬ್ ಅಥವಾ ಕೇಸರಿ ಶಾಲು ವಿಚಾರವಾಗಿ ಶಿಕ್ಷಣ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಮೆರೆಯಲಿ ಎಂದು ಹೇಳಿದರು.