
ಎಚ್ ಬಿ ಆರ್ ಬಡಾವಣೆಯ 2 ನೇ ಹಂತದ ನಾಗವಾರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಸರ್ವೆ ನಂಬರ್ 75 ರ ಒಂದೂಕಾಲು ಎಕರೆ ಜಾಗವನ್ನು ಬಿಟ್ಟುಕೊಡದೇ ಭೂಮಾಲೀಕರು ಆ ಜಾಗದಲ್ಲಿ 15 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್ ಗಳನ್ನು ನಿರ್ಮಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಿ. ಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ 15 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ 15 ವಾಣಿಜ್ಯ ಮಳಿಗೆಗಳು ಹಾಗೂ ಶೆಡ್ ಗಳನ್ನು ನೆಲಸಮ ಮಾಡಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
200 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ
ಈ ಹಿಂದೆ ಮೂರ್ನಾಲ್ಕು ಬಾರಿ ಕಟ್ಟಡಗಳನ್ನು ನೆಲಸಮ ಮಾಡಲು ತೆರಳಿದ ಸಂದರ್ಭದಲ್ಲಿ ಮಾಲೀಕರು ತಮ್ಮ ಪ್ರಭಾವ ಬೀರಿ ಮತ್ತು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಡಿಎ ಅಧಿಕಾರಿಗಳು 200 ಕ್ಕೂ ಹೆಚ್ಚು ಪೊಲೀಸರ ಭದ್ರತೆಯನ್ನು ಪಡೆದುಕೊಂಡು ನೆಲಸಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸ್ವಯಂಪ್ರೇರಿತವಾಗಿ ಜಾಗ ವಾಪಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು, ಎಚ್ ಬಿ ಆರ್, ಎಚ್ ಎಸ್ ಆರ್ ಬಡಾವಣೆಗಳು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಮಾಹಿತಿಗಳು ಇವೆ. ಈ ಹಿನ್ನೆಲೆಯಲ್ಲಿ ಒತ್ತುವರಿದಾರರು ಬಿಡಿಎ ಜಾಗವನ್ನು ಸ್ವಯಂಪ್ರೇರಿತವಾಗಿ ಕೂಡಲೇ ಬಿಟ್ಟುಕೊಡಬೇಕು. ಇಲ್ಲವಾದರೆ, ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸದರಿ ಜಾಗಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.