ಹೈದರಾಬಾದ್: ಇಂದು ಬೆಳಿಗ್ಗೆಯಷ್ಟೇ ನಭಕ್ಕೆ ಚಿಮ್ಮಿದ್ದ ವಿದ್ಯಾರ್ಥಿನಿಯರೇ ಸಿದ್ಧಪಡಿಸಿದ್ದ ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲಗೊಂಡಿದೆ ಎಂದು ತಿಳಿದುಬಂದಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿದ್ದ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹ-SSLV-D1/EOS-02ನ್ನು ಬೆಳಿಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿತ್ತು.
ಎರಡು ಉಪಗ್ರಹ ಹೊತ್ತು ಸಾಗಿದ್ದ SSLV-D1 ರಾಕೆಟ್ ನಿರೀಕ್ಷಿತ ಕಕ್ಷೆ ಬದಲಾಗಿ ಅಸ್ಥಿರ ಕಕ್ಷೆಗೆ ತಲುಪಿದೆ. ಹಾರಾಟದ ಅಂತಿಮ ಹಂತದಲ್ಲಿ ಡೇಟಾ ನಷ್ಟಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ ಎಂದು ಇಸ್ರೋ ತಿಳಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಉಪಗ್ರಹ ಸಿದ್ಧಪಡಿಸಲಾಗಿತ್ತು. ವಿಶ್ವದ ಅತಿ ಚಿಕ್ಕ ರಾಕೆಟ್ ಗಳ ಮಾರುಕಟ್ಟೆಗೆ ಅಡಿಯಿಡುವ ಪ್ರಯತ್ನ ಇದಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಉಡಾವಣೆಗೊಂಡಿತ್ತು.